ಮುಂಬಯಿ: ಮಹಾರಾಷ್ಟ್ರ ವಿಧಾನಸಭೆಯ ಸಭಾಧ್ಯಕ್ಷರಾಗಿ ನಿರೀಕ್ಷೆಯಂತೆ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಆಯ್ಕೆಯಾಗಿದ್ದಾರೆ. ಅವರು ೧೬೪ ಶಾಸಕರ ಬೆಂಬಲ ಪಡೆದು ಸ್ಪೀಕರ್ ಪಟ್ಟಕ್ಕೆ ಏರಿದರು.
ಭಾನುವಾರ ಆರಂಭವಾದ ವಿಶೇಷ ಅಧಿವೇಶನದಲ್ಲಿ ಮೊದಲಿಗೆ ಸ್ಪೀಕರ್ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಪ್ರತಿಯೊಬ್ಬ ಶಾಸಕರಿಗೂ ತಮ್ಮ ಆಯ್ಕೆಯನ್ನು ಧ್ವನಿಯಲ್ಲಿ ತಿಳಿಸಲು ಸೂಚಿಸಲಾಗಿತ್ತು. ಅದರಂತೆ ಪ್ರತಿಯೋರ್ವ ಶಾಸಕರು ಎದ್ದು ನಿಂತು ತಮ್ಮ ಮತವನ್ನು ಚಲಾಯಿಸಿದರು. ಮಹಾ ವಿಕಾಸ ಅಘಾಡಿ ಮೈತ್ರಿಕೂಟದಿಂದ ಶಿವಸೇನೆಯ ಶಾಸಕ ರಾಜನ್ ಸಾಲ್ವಿ ಯವರನ್ನು ಸೋಲಿಸಿ ರಾಹುಲ್ ನಾರ್ವೇಕರ್ ಗೆದ್ದರು. ಸಾಲ್ವಿ ಕೇವಲ ೧೦೭ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
ರಾಹುಲ್ ನಾರ್ವೇಕರ್ ಗೆಲುವಿನಿಂದಾಗಿ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಹೊಸ ಸರಕಾರ ರಚನೆಯಾದ ಬಳಿಕ ಎದುರಾದ ಮೊದಲ ಸವಾಲಿನಲ್ಲಿ ಸರ್ಕಾರ ಗೆದ್ದಂತಾಗಿದೆ.
ಕೊಲಾಬಾ ಶಾಸಕ ರಾಹುಲ್ ನಾರ್ವೇಕರ್ ನೂತನ ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದರು. ರಾಹುಲ್ ನಾರ್ವೇಕರ್ ಈ ಹಿಂದೆ ಶಿವಸೇನೆ ಮತ್ತು ಎನ್‌ಸಿಪಿಯಲ್ಲಿದ್ದು ಮೂರು ವರ್ಷದ ಹಿಂದಷ್ಟೇ ಬಿಜೆಪಿ ಸೇರಿದ್ದರು. ಅವರನ್ನು ಬಿಜೆಪಿ ಸಭ್ಯಾಧ್ಯಕ್ಷರ ಹುದ್ದೆಗೆ ಆಯ್ಕೆ ಮಾಡಿತ್ತು. ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದರು.
೪೫ ವರ್ಷದ ರಾಹುಲ್ ನರ್ವೇಕರ್ ೧೯೯೯ರಿಂದ ೨೦೧೪ರವರೆಗೆ ೧೫ ವರ್ಷ ಕಾಲ ಶಿವಸೇನೆಯಲ್ಲಿದ್ದರು. ೨೦೧೪ರಲ್ಲಿ ಅವರು ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಇದರಿಂದ ಬೇಸರಗೊಂಡು ಎನ್‌ಸಿಪಿ ಸೇರಿದ್ದರು. ೨೦೧೯ರಲ್ಲಿ ಎನ್‌ಸಿಪಿ ಟಿಕೆಟ್‌ನಲ್ಲಿ ಮಾವಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು. ಬಳಿಕ ಅವರು ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದರು. ಕೊಲಾಬಾದಿಂದ ಗೆದ್ದು ಶಾಸಕರಾಗಿದ್ದರು. ಈಗ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಸ್ಪೀಕರ್ ಚುನಾವಣೆಯ ಫಲಿತಾಂಶ ಪ್ರಕಟಿಸುತ್ತಿದ್ದಂತೆಯೇ ರಾಹುಲ್ ನರ್ವೇಕರ್ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿ ಶಿಂಧೆ ಮತ್ತು ಉಪಮುಖ್ಯಮಂತ್ರಿ ಫಡ್ನವಿಸ್ ಅವರನ್ನು ಸ್ಪೀಕರ್ ಪೀಠಕ್ಕೆ ಕರೆದುಕೊಂಡು ಬಂದು ಕೂರಿಸಿದರು. ನಂತರ ಮುಖ್ಯಮಂತ್ರಿ ಶಿಂಧೆ ಸರ್ಕಾರದ ಪರವಾಗಿ ನೂತನ ಸ್ಪೀಕರ್ ಅವರನ್ನು ಅಭಿನಂದಿಸುವ ನಿರ್ಣಯ ಮಂಡಿಸಿದರು.
ಇದನ್ನೂ ಓದಿ | Maha politics: ನಾಳೆ ಸ್ಪೀಕರ್ ಕದನ, ಸೇನೆ-ಎನ್‌ಸಿಪಿಯಲ್ಲಿದ್ದ ನಾರ್ವೇಕರ್‌ಗೆ ಬಿಜೆಪಿ ಟಿಕೆಟ್! ಉದ್ಧವ್ ಬಣದಿಂದ ಸಾಳ್ವಿ