Site icon Vistara News

Tiger Captured | 10 ತಿಂಗಳಲ್ಲಿ 13 ಜನರ ರಕ್ತ ಹೀರಿದ್ದ ನರಭಕ್ಷಕ ಹುಲಿಯ ಸೆರೆ, ನಿಟ್ಟುಸಿರು ಬಿಟ್ಟ ಜನ

Tiger

ಮುಂಬೈ: ಮಹಾರಾಷ್ಟ್ರದಲ್ಲಿ ಜನರನ್ನು ಭಯದ ಮಡುವಿನಲ್ಲಿ ಬೀಳಿಸಿದ್ದ, ೧೦ ತಿಂಗಳಿಂದ ಭೀತಿಯಲ್ಲಿಯೇ ಕಾಲ ಕಳೆಯುವಂತೆ ಮಾಡಿದ್ದ, ೧೩ ಜನರ ರಕ್ತವನ್ನು ಹೀರಿದ್ದ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯುವಲ್ಲಿ (Tiger Captured) ಮಹಾರಾಷ್ಟ್ರ ಅರಣ್ಯ ಇಲಾಖೆಯು ಕೊನೆಗೂ ಸಫಲವಾಗಿದೆ. ಆ ಮೂಲಕ ವಿದರ್ಭದ ಜನ ನಿಟ್ಟುಸಿರು ಬಿಡುವಂತಾಗಿದೆ.

ಗಡ್ಚಿರೋಲಿ ಹಾಗೂ ಚಂದ್ರಾಪುರ ಜಿಲ್ಲೆಗಳಲ್ಲಿ ಕಾನ್‌ಫ್ಲಿಕ್ಟ್‌ ಟೈಗರ್‌ (CT 1) ಎಂದೇ ಖ್ಯಾತಿಯಾಗಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಯು ಹರಸಾಹಸ ಪಟ್ಟು ಹಿಡಿದಿದ್ದಾರೆ. ವಾಡ್ಸಾ ಅರಣ್ಯದಲ್ಲಿ ಅಡಗಿ ಮನುಷ್ಯರ ಮೇಲೆ ಎರಗುವುದು ಇದಕ್ಕೆ ರೂಢಿಯೇ ಆಗಿತ್ತು. ಇದನ್ನು ಹಿಡಿದು ಈಗ ನಾಗ್ಪುರದಲ್ಲಿರುವ ಗೋರೇವಾಡ ಕೇಂದ್ರಕ್ಕೆ ಸಾಗಿಸಲಾಗಿದೆ.

“ಸೆರೆ ಸಿಕ್ಕ ಹುಲಿಯು ವಾಡ್ಸಾದಲ್ಲಿ ಆರು ಜನರನ್ನು ಬಲಿ ಪಡೆದಿತ್ತು. ಹಾಗೆಯೇ, ಬಂಡಾರದಲ್ಲಿ ನಾಲ್ಕು, ಬ್ರಹ್ಮಪುರಿ ಅರಣ್ಯ ವ್ಯಾಪ್ತಿಯಲ್ಲಿ ಮೂವರ ರಕ್ತ ಹೀರಿತ್ತು. ಇದರಿಂದಾಗಿ ಜನ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿತ್ತು. ಅಕ್ಟೋಬರ್‌ ೪ರಂದು ನಾಗ್ಪುರ ವ್ಯಾಪ್ತಿಯ ಹಿರಿಯ ಅಧಿಕಾರಿಗಳು ಸಭೆ ನಡೆಸಿ, ಹುಲಿಯನ್ನು ಹಿಡಿಯುವ ಕಾರ್ಯಾಚರಣೆಗೆ ಯೋಜನೆ ರೂಪಿಸಿದ್ದರು. ಅದರಂತೆ, ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿಯಲಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Tiger Captured | ಕೊಡಗಿನಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ವ್ಯಾಘ್ರ ಸೆರೆ

Exit mobile version