Site icon Vistara News

Maharastra political crisis : ಮಹಾರಾಷ್ಟ್ರದಲ್ಲಿ ಠಾಕ್ರೆ ಸರ್ಕಾರ ಮರುಸ್ಥಾಪನೆ ಅಸಾಧ್ಯ: ಸುಪ್ರೀಂಕೋರ್ಟ್

Maharastra political crisis: Shinde-Thackrey faction dispute transferred to Supreme Court extended bench

ನವ ದೆಹಲಿ: ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಬಣದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದ (Maha Vikas Aghadi) ಮರು ಸ್ಥಾಪನೆ ಅಸಾಧ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದರೊಂದಿಗೆ ಶಿಂಧೆ ಸರ್ಕಾರದ ಸ್ಥಿರತೆಗೆ ಸುಪ್ರೀಂ ಬಲ ಬಂದಂತಾಗಿದೆ. ಶಿವಸೇನೆಯ ಏಕನಾಥ ಶಿಂಧೆ ಮತ್ತು ಉದ್ಧವ್‌ ಠಾಕ್ರೆ ಬಣದ ನಡುವಿನ ಕಾನೂನು ಹೋರಾಟಕ್ಕೆ ಸಂಬಂಧಿಸಿ ಹೊರಡಿಸಿರುವ ಆದೇಶದಲ್ಲಿ, ಪ್ರಕರಣದ ವಿಚಾರಣೆಯನ್ನು ( Maharastra political crisis) ಸುಪ್ರೀಂಕೋರ್ಟ್‌ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.

ಉದ್ಧವ್‌ ಠಾಕ್ರೆ ಅವರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿರುವುದರಿಂದ ಆ ಸರ್ಕಾರದ ಮರುಸ್ಥಾಪನೆ ಅಸಾಧ್ಯ. ಉಧ್ಧವ್‌ ಠಾಕ್ರೆ ರಾಜೀನಾಮೆ ನೀಡಿದ್ದರಿಂದ ಏಕನಾಥ ಶಿಂಧೆ ನೇತೃತ್ವದ ಬಣವನ್ನು ಸರ್ಕಾರ ರಚನೆಗೆ ಆಹ್ವಾನಿಸಿರುವ ರಾಜ್ಯಪಾಲರ ಕ್ರಮ ಸರಿಯಾಗಿತ್ತು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಆದರೆ ಠಾಕ್ರೆ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಭಾವಿಸಿ ಸದನಲ್ಲಿ ಬಹುಮತ ಸಾಬೀತುಪಡಿಸಲು ಆದೇಶಿಸಿದ್ದೂ ಸರಿಯಾದ ನಿರ್ಧಾರವಲ್ಲ ಎಂದು ರಾಜ್ಯಪಾಲರನ್ನು ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಅರ್ಜಿದಾರರು ಯಥಾಸ್ಥಿತಿಯನ್ನು (status quo) ಕಾಪಾಡಿಕೊಳ್ಳಲು ಆದೇಶಿಸುವಂತೆ ಒತ್ತಾಯಿಸಿದ್ದಾರೆ. ಠಾಕ್ರೆ ರಾಜೀನಾಮೆ ನೀಡದಿರುತ್ತಿದ್ದರೆ ಅವರ ನೇತೃತ್ವದ ಸರ್ಕಾರವನ್ನು ಮರು ಸ್ಥಾಪನೆಗೊಳಿಸಬಹುದಿತ್ತು. ಈ ಮೂಲಕ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಆದೇಶಿಸಬಹುದಿತ್ತು. ಜತೆಗೆ ಠಾಕ್ರೆ ವಿಶ್ವಾಸ ಮತ ಪರೀಕ್ಷೆಯನ್ನೂ ಎದುರಿಸಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಇದನ್ನೂ ಓದಿ: ದೇವೇಂದ್ರ ಫಡ್ನವಿಸ್ ಬಂಧನಕ್ಕೆ ಮುಂದಾಗಿದ್ದ ಉದ್ಧವ್ ಸರ್ಕಾರ! ಮಹಾರಾಷ್ಟ್ರ ಸಿಎಂ ಶಿಂಧೆ ಮಾಹಿತಿ

ಏಕನಾಥ ಶಿಂಧೆ ಬಣದ ವಿಪ್‌ ನೇಮಕವನ್ನು ಸ್ಪೀಕರ್‌ ಮಾಡಿರುವುದು ಕೂಡ ತಪ್ಪು. ವಿಪ್‌ ನೇಮಕದ ಅಧಿಕಾರ ರಾಜಕೀಯ ಪಕ್ಷದ್ದಾಗಿದೆ. ಪಕ್ಷದ ಆಂತರಿಕ ಕಲಹವನ್ನು ಇತ್ಯರ್ಥಪಡಿಸಲು ವಿಶ್ವಾಸ ಮತ ಪರೀಕ್ಷೆಯನ್ನು ಬಳಸಬಾರದು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಈ ಆದೇಶದೊಂದಿಗೆ ಉದ್ಧವ್ ಠಾಕ್ರೆ ಮತ್ತು ಏಕನಾಥ ಶಿಂಧೆ(Uddhav vs Shinde) ನಡುವೆ ಒಂದು ವರ್ಷದಿಂದ ನಡೆಯುತ್ತಿರುವ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ (supreme court) ತಿರುವು ಕೊಟ್ಟಿದೆ. ಈ ಆದೇಶದೊಂದಿಗೆ ಏಕನಾಥ್‌ ಶಿಂಧೆ ಸರ್ಕಾರ ಮುಂದುವರಿಯುವುದು ಖಾತರಿಯಾದಂತಾಗಿದೆ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆ ಏನು?

  1. ಜೂನ್ 2022ರಲ್ಲಿ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ, ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ್ ಶಿಂಧೆ 40 ಶಾಸಕರೊಂದಿಗೆ ಬಂಡಾಯ ಸಾರುವುದರೊಂದಿಗೆ ಬಿಕ್ಕಟ್ಟು ಪ್ರಾರಂಭವಾಯಿತು.
  2. ಶಿಂಧೆ ನಾಯಕತ್ವದಲ್ಲಿ ಬಂಡುಕೋರ ಶಾಸಕರು ಅಸ್ಸಾಂಗೆ ತೆರಳಿದರು. ನಂತರ ಬಿಜೆಪಿಯ ಸಹಾಯದಿಂದ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಏಕನಾಥ್ ಶಿಂಧೆ ಬಣ ಹೆಚ್ಚಿನ ಶಾಸಕರನ್ನು ಹೊಂದಿದ್ದರಿಂದ ನಿಜವಾದ ಶಿವಸೇನೆ ಎಂದು ತನ್ನನ್ನು ಗುರುತಿಸಿಕೊಂಡಿತು.
  3. ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದರು. ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಗಿನ ರಾಜ್ಯಪಾಲ ಬಿ.ಎಸ್.ಕೋಶ್ಯಾರಿ ಅವರು ಸದನದಲ್ಲಿ ವಿಶ್ವಾಸಮತ ಪರೀಕ್ಷೆಗೆ ಆದೇಶಿಸಿದರು. ಇದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲಿಲ್ಲ. ಜುಲೈ 4ರಂದು ಏಕನಾಥ್ ಶಿಂಧೆ ವಿಶ್ವಾಸಮತ ಗೆದ್ದರು.
  4. ಏಕನಾಥ್‌ ಶಿಂಧೆ ಪಾಳಯಕ್ಕೆ ತೆರಳಿದ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.
  5. ಬಾಳಾಸಾಹೇಬ್ ಠಾಕ್ರೆಯವರ ಮೂಲ ಶಿವಸೇನೆಯ ಚಿಹ್ನೆಯಾದ ʼಬಿಲ್ಲು ಮತ್ತು ಬಾಣʼಕ್ಕಾಗಿ ಹೊಡೆದಾಟ ಆರಂಭವಾಯಿತು. ಇದನ್ನು ಚುನಾವಣಾ ಆಯೋಗ ಶಿಂಧೆ ಬಣಕ್ಕೆ ನೀಡಿತು. ಉದ್ಧವ್ ಅವರ ಬಣಕ್ಕೆ ಜ್ಯೋತಿಯ ಚಿಹ್ನೆ ನೀಡಿತು. ಇದಕ್ಕೆ ʼಉದ್ಧವ್ ಬಾಳಾಸಾಹೇಬ್ ಠಾಕ್ರೆ ಶಿವಸೇನೆʼ ಎಂಬ ಹೊಸ ಹೆಸರನ್ನು ನೀಡಲಾಗಿದೆ.
  6. ʼʼದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆಯೇ ಎಂಬುದನ್ನು ಸುಪ್ರೀಂ ಕೋರ್ಟ್‌ನ ತೀರ್ಪು ನಿರ್ಧರಿಸಲಿದೆʼʼ ಎಂದು ಉದ್ಧವ್ ಬಾಳಾಸಾಹೇಬ್ ಠಾಕ್ರೆ ಕಡೆಯ ಸಂಸದ ಸಂಜಯ್ ರಾವುತ್ ಹೇಳಿದ್ದರು.
  7. ತೀರ್ಪು ಶಿಂಧೆ ಪರವಾಗಿ ಬಂದಿರುವುದರಿಂದ ಏಕನಾಥ್ ಶಿಂಧೆ ಸಿಎಂ ಆಗಿ ಮುಂದುವರಿಯಲಿದ್ದಾರೆ.
  8. ತೀರ್ಪು ಉದ್ಧವ್ ಠಾಕ್ರೆಯವರ ಪರವಾಗಿ ಬಂದರೆ ಏಕನಾಥ್‌ ಶಿಂಧೆ ರಾಜೀನಾಮೆ ನೀಡಬೇಕಾಗುತ್ತಿತ್ತು.
  9. ಉದ್ಧವ್ ಠಾಕ್ರೆ ಅವರ ಪರ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಕೋರ್ಟ್‌ನಲ್ಲಿ ಕಾನೂನು ಸಮರದ ನೇತೃತ್ವ ವಹಿಸಿದ್ದರು. ಶಿಂಧೆ ಶಿಬಿರಕ್ಕೆ ಹರೀಶ್ ಸಾಳ್ವೆ, ಎನ್‌ಕೆ ಕೌಲ್ ಮತ್ತು ಮಹೇಶ್ ಜೇಠ್ಮಲಾನಿ ವಕೀಲರಾಗಿದ್ದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆಗಿನ ರಾಜ್ಯಪಾಲ ಬಿ.ಎಸ್ ಕೋಶ್ಯಾರಿ ಅವರನ್ನು ಪ್ರತಿನಿಧಿಸಿದ್ದರು.
  10. ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಕೋಶ್ಯಾರಿ ಪಾತ್ರವನ್ನು ಪ್ರಶ್ನಿಸಿತ್ತು. ಸರ್ಕಾರದ ಪತನಕ್ಕೆ ಕಾರಣವಾಗುವ ಯಾವುದೇ ವಿಷಯಕ್ಕೆ ರಾಜ್ಯಪಾಲರು ಪ್ರವೇಶಿಸಬಾರದು ಎಂದು ಸೂಚಿಸಿತ್ತು.
Exit mobile version