ಮುಂಬಯಿ: ಮಹಾರಾಷ್ಟ್ರದಲ್ಲಿ ಭಾನುವಾರ ದಿಢೀರ್ ನಡೆದ ದಿಢೀರ್ ಬೆಳವಣಿಗೆಯಲ್ಲಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಪಕ್ಷದಿಂದ ಸಿಡಿದೆದ್ದು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವನ್ನು ಉಪಮುಖ್ಯಮಂತ್ರಿಯಾಗಿ ಸೇರ್ಪಡೆಯಾಗಿದ್ದಾರೆ. ರಾಜ್ ಭವನದಲ್ಲಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅಜಿತ್ ದಾದಾ ಹಮ್ ತುಮ್ಹಾರೆ ಸಾಥ್ ಹೈ ಎಂಬ ಸ್ಲೋಗನ್‌ಗಳು ಕೇಳಿ ಬಂತು. 2019ರಿಂದ ಮೂರನೇ ಬಾರಿಗೆ ಡಿಸಿಎಂ ಆಗಿ ಅಜಿತ್ ಪವಾರ್ ಅಧಿಕಾರಕ್ಕೇರಿದ್ದಾರೆ. ಇದರೊಂದಿಗೆ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರ ಪತನದ ಬಳಿಕ ಶನಿವಾರದ ತನಕ ಶಾಂತವಾಗಿದ್ದ ಮಹಾರಾಷ್ಟ್ರ ರಾಜಕಾರಣ ಹಠಾತ್ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಸಲ ಶಿಂಧೆ ಸರ್ಕಾರ ಮತ್ತಷ್ಟು ಪ್ರಬಲವಾದಂತಾಗಿದೆ. ಪ್ರತಿಪಕ್ಷ ಎನ್‌ಸಿಪಿ ಡೋಲಾಯಮಾನವಾಗಿದೆ. ಶಿಂಧೆ ಸರ್ಕಾರದ ಮೇಲೆ ಬಿಜೆಪಿಯ ಹಿಡಿತ ಮತ್ತಷ್ಟು ಬಿಗಿಯಾಗಿದೆ.
ಅಜಿತ್ ಪವಾರ್ ಬಿಜೆಪಿಗೆ ಸೇರಲಿದ್ದಾರೆಯೇ ಅಥವಾ ಎನ್‌ಸಿಪಿ ಹೋಳಾಗಲಿದೆಯೇ? ಅಜಿತ್ ಪವಾರ್ ಬಿಜೆಪಿಗೆ ಸೇರಿಲ್ಲ. ಒಟ್ಟು 53 ಶಾಸಕರ ಪೈಕಿ 40 ಮಂದಿಯ ಬೆಂಬಲ ತಮಗಿದೆ ಎಂದಿರುವ ಅಜಿತ್ ಪವಾರ್ ಡಿಸಿಎಂ ಆಗಿದ್ದಾರೆ. ಹೀಗಾಗಿ ಎನ್‌ಸಿಪಿಯನ್ನು ವಿಭಜಿಸಿ ಅಸೆಂಬ್ಲಿಯಲ್ಲಿ ಪಕ್ಷಕ್ಕೆ ಮೆಜಾರಿಟಿ ತೋರಿಸುವ ಹಾದಿಯಲ್ಲಿ ಅಜಿತ್ ಪವಾರ್ ಇದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಕೆಲ ವರದಿಗಳ ಪ್ರಕಾರ 30 ಶಾಸಕರು ಅಜಿತ್ ಪವಾರ್ ಅವರನ್ನು ಬೆಂಬಲಿಸುತ್ತಿದ್ದಾರೆ. ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಅಣ್ಣನ ಮಗ.
ಅಜಿತ್ ಬಣದ ಅನರ್ಹತೆಗೆ ಶರದ್ ಪವಾರ್ ನಡೆ? ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಅಜಿತ್ ಪವಾರ್ ಜತೆ ಸರ್ಕಾರವನ್ನು ಸೇರಿಕೊಂಡಿರುವ ಶಾಸಕರ ವಿರುದ್ಧ ಅನರ್ಹತೆಗೊಳಿಸಲು ಯತ್ನಿಸುವ ಸಾಧ್ಯತೆ ಇದೆ. ಈ ನಡುವೆ ಎನ್‌ಸಿಪಿ ಅಧ್ಯಕ್ಷರ ಜತೆ ಮಾತನಾಡಿರುವ ಶಿವಸೇನಾ ವಕ್ತಾರ ಸಂಜಯ್ ರಾವತ್, ನಮಗೆ ಜನರ ಬೆಂಬಲ ಇದೆ. ನಾವು ಪ್ರಬಲವಾಗಿಯೇ ಇದ್ದೇವೆ. ನಾವು ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವ ಸೇನಾವನ್ನು ಮರು ನಿರ್ಮಿಸಲಿದ್ದೇವೆ ಎಂದು ಹೇಳಿದ್ದಾರೆ.
ಇವತ್ತಿನ ಬಂಡಾಯ ಇತರರಿಗೆ ಹೊಸತು ಅಂತ ಅನ್ನಿಸಿರಬಹುದು. ನನಗೆ ಹೊಸತಲ್ಲ, ಕೆಲ ದಿನಗಳ ಹಿಂದೆ ಪ್ರಧಾನಿಯವರು ಎನ್‌ಸಿಪಿ ಬಗ್ಗೆ ಮಾತನಾಡಿದ್ದರು. ಎನ್‌ಸಿಪಿ ಈಗ ಮುಗಿದ ಅಧ್ಯಾಯ ಎಂದಿದ್ದರು. ನೀರಾವರಿ ಹಗರಣದ ಬಗ್ಗೆ ಪ್ರಸ್ತಾಪಿಸಿದ್ದರು. ಈಗ ಪಕ್ಷದ ಕೆಲ ನಾಯಕರು ಎನ್‌ಡಿಎ ಸೇರಿದ್ದಾರೆ. ಎನ್‌ಸಿಪಿಯ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಕಂಡು ಸಂತಸವಾಗಿದೆ. ಈಗ ಹಗರಣದ ಆರೋಪಗಳು ಇತ್ಯರ್ಥ ಆಗಿರಬಹುದು. ಇದಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದ ತಿಳಿಸುವೆ ಎಂದು ಶರದ್ ಪವಾರ್ ಕುಟುಕಿದ್ದಾರೆ.
महाराष्ट्रातील जनतेची इच्छा, राष्ट्रवादी काँग्रेस पक्षातील सहकाऱ्यांचा पाठिंबा, विश्वासाच्या बळावर आज राज्याचा उपमुख्यमंत्री म्हणून पद व गोपनीयतेची शपथ घेतली. माझ्या या पदाचा उपयोग जनतेच्या कल्याणासाठी, महाराष्ट्राच्या विकासासाठी होईल असा विश्वास देतो. pic.twitter.com/mvZ2oh7w6u
— Ajit Pawar (@AjitPawarSpeaks) July 2, 2023
ಅಜಿತ್ ಪವಾರ್ ಬಣಕ್ಕೆ ಶರದ್ ಪವಾರ್ ಅವರ ಆಶೀರ್ವಾದ ಇಲ್ಲ. ಪಕ್ಷದ ಎಲ್ಲ ಪದಾಧಿಕಾರಿಗಳು ಶರದ್ ಪವಾರ್ ಜತೆಗೆ ಇದ್ದಾರೆ ಎಂದು ಎನ್‌ಸಿಪಿಯ ವಕ್ತಾರರು ತಿಳಿಸಿದ್ದಾರೆ. ಮಹಾರಾಷ್ಟ್ರದ 288 ಸದಸ್ಯ ಬಲದ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. 2022ರ ಜೂನ್ 30ರಂದು ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನವಾದ ಬಳಿಕ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ಇದನ್ನೂ ಓದಿ: Ajit Pawar: ಮೋದಿಯಿಂದ ದೇಶದ ಏಳಿಗೆ; ಶಿಂಧೆ ಸರ್ಕಾರ ಸೇರಿದ ಬೆನ್ನಲ್ಲೇ ಅಜಿತ್ ಹೇಳಿಕೆ; ಈಗ NCP VS NCP
ಎನ್‌ಸಿಪಿಯಿಂದಲೇ ಚುನಾವಣೆಯಲ್ಲಿ ಸ್ಪರ್ಧೆ: ಅಜಿತ್ ಪವಾರ್: ಮಹಾರಾಷ್ಟ್ರದ ಅಭಿವೃದ್ಧಿಗೋಸ್ಕರ, ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚು ಫಂಡ್ ತರುವುದಕ್ಕೋಸ್ಕರ, ಜನರ ನಾಡಿಮಿಡಿತದಂತೆ ನಡೆದುಕೊಳ್ಳಲು ಸರ್ಕಾರವನ್ನು ಸೇರಿರುವುದಾಗಿ ಅಜಿತ್ ಪವಾರ್ ತಿಳಿಸಿದ್ದಾರೆ. ಮುಂದಿನ ಪ್ರತಿ ಚುನಾವಣೆಯನ್ನೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಹೆಸರು ಮತ್ತು ಚಿಹ್ನೆಯಿಂದಲೇ ಎದುರಿಸಲಾಗುವುದು ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಅಜಿತ್ ಪವಾರ್ ಬಂಡಾಯ ಹೊಸತೇನಲ್ಲ: ಅಂದಹಾಗೆ ಅಜಿತ್ ಪವಾರ್ ಅವರು ಶರದ್ ಪವಾರ್ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿರುವುದು ಇದು ಮೊದಲೇನಲ್ಲ. 14 ವರ್ಷ ಹಿಂದೆಯೇ 2009ರಲ್ಲಿ ಶರದ್ ಪವಾರ್ ನಾಯಕತ್ವವನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ಪಕ್ಷದ ಎಲ್ಲ ಹುದ್ದೆಗೂ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರು. ಕಳೆದ ಮೂರು ವರ್ಷಗಳಲ್ಲಿ ಮೂರು ಸಲ ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದಂತಾಗಿದೆ. ಎರಡು ಸಲ ಎನ್‌ಡಿಎ ಪಾಳೆಯದಿಂದ, ಒಂದು ಸಲ ಮಹಾ ವಿಕಾಸ್ ಅಘಾಡಿಯಿಂದ. ಹತ್ತು ವರ್ಷಗಳ ಬಳಿಕ ಅಜಿತ್ ಪವಾರ್ ಅವರು 2019ರಲ್ಲಿ ಅಸೆಂಬ್ಲಿ ಚುನಾವಣೆ ಬಳಿಕ ಮತ್ತೆ ಬಂಡಾಯವೆದ್ದು ದೇವೇಂದ್ರ ಫಡ್ನವಿಸ್ ಜತೆ ಸೇರಿ ಡಿಸಿಎಂ ಆಗಿದ್ದರು. ಆದರೆ 80 ಗಂಟೆಯಲ್ಲಿ ಸರ್ಕಾರ ಕುಸಿದಿತ್ತು. ಪಕ್ಷವನ್ನು ಒಡೆಯಲು ಅಜಿತ್ ಪವಾರ್‌ಗೆ ಸಾಧ್ಯವಾಗಿರಲಿಲ್ಲ. ಬಳಿಕ ಪಕ್ಷಕ್ಕೆ ಮರಳಿ ಮಹಾ ವಿಕಾಸ ಅಘಾಡಿ ಸರ್ಕಾರದದಲ್ಲಿ ಮತ್ತೆ ಡಿಸಿಎಂ ಆಗಿದ್ದರು. ಈಗ ಮತ್ತೆ ಬಂಡಾಯವೆದ್ದು ಶಿಂಧೆ ಸರ್ಕಾರ ಸೇರಿದ್ದಾರೆ. ಅಜಿತ್ ಪವಾರ್ ಜತೆಗೆ ಎನ್‌ಸಿಪಿಯ ಮತ್ತೊಬ್ಬ ನಾಯಕ ಛಗನ್ ಭುಜ್‌ಬಲ್ ಕೂಡ ಎನ್‌ಡಿಎ ಸೇರಿದ್ದಾರೆ. ಪ್ರಫುಲ್ ಪಟೇಲ್ ಕೂಡ ಅಜಿತ್ ಪವಾರ್ ಬಣ ಸೇರುವ ನಿರೀಕ್ಷೆ ಇದೆ.