ನವದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ (National Herald Case) ರಾಹುಲ್ ಗಾಂಧಿ ಇ ಡಿ ವಿಚಾರಣೆ ವಿರೋಧಿಸಿ ಮಂಗಳವಾರ (ಜೂ.23) ಕಾಂಗ್ರೆಸ್‌ನವರು ನಡೆಸಿದ ಪ್ರತಿಭಟನೆ ವೇಳೆ ಅಖಿಲ ಭಾರತೀಯ ಮಹಿಳಾ ಕಾಂಗ್ರೆಸ್ (AIMC) ಅಧ್ಯಕ್ಷೆ ನೆಟ್ಟಾ ಡಿಸೋಜಾ ಕರ್ತವ್ಯ ನಿರತ ಪೊಲೀಸರ ಮೇಲೆ ಉಗುಳಿದ್ದಾರೆ. ಈ ಅಸಹ್ಯಕರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಕಾಂಗ್ರೆಸ್ ನಾಯಕಿಯ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಸ್ ಹತ್ತಿಸಿದ್ದಾರೆ. ಆದರೆ ನೆಟ್ಟಾ ಬಸ್ ಬಾಗಿಲಿನಲ್ಲಿ ನಿಂತು ರಕ್ಷಣಾ ಪಡೆಯ ಸಿಬ್ಬಂದಿ ಜತೆ ಗಲಾಟೆ ಮಾಡಿದ್ದಲ್ಲದೆ, ಕೊನೆಯಲ್ಲಿ ಅವರ ಮೇಲೆ ಎಂಜಲು ಉಗುಳಿದ್ದನ್ನು ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ದೆಹಲಿ ಪೊಲೀಸ್ ಇಲಾಖೆ ಪ್ರತಿಕ್ರಿಯೆ ನೀಡಿದೆ. ಕರ್ತವ್ಯ ನಿರತ ಪೊಲೀಸರ ಮೇಲೆ ಡಿಸೋಜಾ ಹಲ್ಲೆ ನಡೆಸಿದ್ದಲ್ಲದೆ, ಅವರ ಮೇಲೆ ಉಗುಳಿದ್ದಾರೆ. ಅನುಚಿತವಾಗಿ ವರ್ತಿಸಿದ ಅಖಿಲ ಭಾರತೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ ಎಂದು ಪೊಲೀಸ್ ಡಿಪಾರ್ಟ್‌ಮೆಂಟ್ ತಿಳಿಸಿದೆ. ಇನ್ನೊಂದೆಡೆ AIMC ಟ್ವೀಟ್ ಮಾಡಿ, ʼಪೊಲೀಸರು ಬಿಜೆಪಿಯ ಕೈಗೊಂಬೆಗಳು. ಪ್ರತಿಭಟನೆ ನಡೆಸುತ್ತಿದ್ದ ನೆಟ್ಟಾ ಡಿಸೋಜಾ ಮತ್ತು ಇತರರನ್ನು ಬಲವಂತವಾಗಿ ಬಂಧಿಸಿದರುʼ ಎಂದು ಆರೋಪಿಸಿದೆ.
ಜೂ.13ರಿಂದ ರಾಹುಲ್ ಗಾಂಧಿ ಇ.ಡಿ. ವಿಚಾರಣೆ ಶುರುವಾದಾಗಿನಿಂದ ಕಾಂಗ್ರೆಸ್ ಕೂಡ ಪ್ರತಿಭಟನೆ ನಡೆಸುತ್ತಲೇ ಇದೆ. ದೆಹಲಿಯಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಕಾಂಗ್ರೆಸ್ ಪ್ರಮುಖರು-ಕಾರ್ಯಕರ್ತರು ಸತ್ಯಾಗ್ರಹ ನಡೆಸಿದ್ದರು. ಗುವಾಹಟಿಯಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಹಾಯಕ ಪೊಲೀಸ್ ಆಯುಕ್ತರ ಮೇಲೆ ದಾಳಿ ನಡೆಸಿದ್ದರು. ಹೈದರಾಬಾದ್‌ನಲ್ಲಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಪೊಲೀಸ್ ಅಧಿಕಾರಿಯೊಬ್ಬರ ಅಂಗಿಯ ಕಾಲರ್ ಹಿಡಿದು ಎಳೆಯುವ ಜತೆ, ಅವರ ಮೈಮೇಲೆ ನೀರು ಸುರಿಸಿದಿದ್ದರು. ಈ ವಿಡಿಯೋಗಳೂ ಕೂಡ ವೈರಲ್ ಆಗಿದ್ದವು. ಹೀಗೆ ಕಾಂಗ್ರೆಸ್ ಪ್ರಮುಖರು ಪ್ರತಿಭಟನೆ ನೆಪದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಬಿಜೆಪಿ ವಿರೋಧಿಸಿದೆ. ಇದೆಂಥಾ ಅನಾಗರಿಕತೆ? ಎಂದು ಕಿಡಿಕಾರಿದೆ.
ಇದನ್ನೂ ಓದಿ: ʼಇ ಡಿ ವಿಷಯ ಬಿಡಿ, ಅಗ್ನಿಪಥ್ ಹೋರಾಟಕ್ಕೆ ಸಜ್ಜಾಗಿʼ; ಕಾಂಗ್ರೆಸ್ಸಿಗರಿಗೆ ರಾಹುಲ್ ಗಾಂಧಿ ಕರೆ