ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಲೋಕಸಭಾ ಸದಸ್ಯೆ ಮಹುವಾ ಮೊಯಿತ್ರಾ (TMC MP Mahua Moitra) ಅವರು ‘ಪ್ರಶ್ನೆಗಾಗಿ ಲಂಚʼ ವಿವಾದದ ಪ್ರಕರಣದಲ್ಲಿ ವಿಚಾರಣೆಗಾಗಿ ಗುರುವಾರ ಕೆಳಮನೆಯ ನೀತಿ ಸಮಿತಿಯ (Lok Sabha Ethnics Committee) ಮುಂದೆ ಹಾಜರಾದರು.
ಭಾರತೀಯ ಜನತಾ ಪಕ್ಷದ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಮೊಯಿತ್ರಾ ವಿರುದ್ಧದ ʼಪ್ರಶ್ನೆಗಾಗಿ ಲಂಚʼದ ಆರೋಪ ಮಾಡಿದ್ದು, ಅದರ ಬಗ್ಗೆ ನೀತಿ ಸಮಿತಿ ತನಿಖೆ ನಡೆಸುತ್ತಿದೆ. ದೂರುದಾರರಲ್ಲಿ ಮಹುವಾ ಮೊಯಿತ್ರಾ ಅವರ ಮಾಜಿ ಸಂಗಾತಿ, ಮೋಯಿತ್ರಾ ಅವರಿಂದ ʼಜಿಲ್ಟೆಡ್ ಎಕ್ಸ್’ (ತಿರುಗಿಬಿದ್ದ ಪ್ರಿಯಕರ) ಎಂದು ಕರೆಸಿಕೊಂಡಿರುವ ವಕೀಲ ಜೈ ಅನಂತ್ ದೆಹದ್ರೈ ಕೂಡ ಇದ್ದಾರೆ. ದುಬೈ ಮೂಲದ ಖ್ಯಾತ ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಪಡೆದು ಮೊಯಿತ್ರಾ ಅವರು ತಮ್ಮ ಸಂಸದೀಯ ಖಾತೆಯ ಮೂಲಕ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.
ʼಕ್ಯಾಶ್ ಫಾರ್ ಕ್ವೆಶ್ಚನ್’ ಪ್ರಕರಣದ ಹೊರತಾಗಿಯೂ ಮಹುವಾ ಮೊಯಿತ್ರಾ ಮತ್ತು ಜೈ ಅನಂತ್ ಮತ್ತೊಂದು ಕಾನೂನು ಸಮರದಲ್ಲಿ ತೊಡಗಿದ್ದಾರೆ. ಅದು ಒಂದು ಸಾಕುನಾಯಿಯ ಮಾಲಿಕತ್ವಕ್ಕಾಗಿ. ರೋಟ್‌ವೀಲರ್ ನಾಯಿ ʼಹೆನ್ರಿʼಯ ಕಸ್ಟಡಿ ಪಡೆಯಲು ಇಬ್ಬರೂ ಹೋರಾಡುತ್ತಿದ್ದಾರೆ. ಇಬ್ಬರೂ ಜತೆಗಿದ್ದಾಗ ಸೇರಿ ಖರೀದಿಸಿದ ನಾಯಿ ಇದಾಗಿದ್ದು, ಸಂಬಂಧ ಮುರಿದುಬಿದ್ದ ನಂತರ ನಾಯಿಗಾಗಿ ಕಿತ್ತಾಡಿಕೊಂಡಿದ್ದಾರೆ. ತನ್ನ ನಾಯಿಯನ್ನು ಅಪಹರಿಸಲಾಗಿದೆ ಎಂದು ಇಬ್ಬರೂ ಪರಸ್ಪರ ದೂರಿಕೊಂಡಿದ್ದರು.
ʼʼತಾನು ಯಾರಿಗೂ ಹೆದರುವುದಿಲ್ಲ. ಯಾರಿಂದಲೂ ಹಿಂಸೆಗೆ ಒಳಗಾಗುವುದಿಲ್ಲ. ಯಾರಾದರೂ ತಾನು ಬಲಿಪಶು ಎಂದು ನಟಿಸಿ ಪ್ರಕರಣದ ನಿರೂಪಣೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ, ಇಡೀ ದೇಶವು ಅದನ್ನು ನೋಡುತ್ತಿದೆʼʼ ಎಂದು ಜೈ ಅನಂತ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಮಹುವಾ ಮೊಯಿತ್ರಾ ಅವರು ಕೆಲವು ಟಿವಿ ಸಂದರ್ಶನಗಳಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ಅವರು ದರ್ಶನ್ ಹಿರಾನಂದಾನಿಗೆ ತಮ್ಮ ಸಂಸತ್ತಿನ ಲಾಗಿನ್ ಅನ್ನು ನೀಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂಸತ್ ಲಾಗಿನ್ ಮಾಹಿತಿ ರಹಸ್ಯವಾಗಿಲ್ಲದಿರುವುದರಿಂದ ಭದ್ರತೆಗೆ ಯಾವುದೇ ಬೆದರಿಕೆ ಇಲ್ಲ ಎಂದು ಮಹುವಾ ಮೊಯಿತ್ರಾ ಪ್ರತಿಪಾದಿಸಿದ್ದಾರೆ. ಇವರ ಖಾತೆಯನ್ನು ದುಬೈನಿಂದ ಲಾಗಿನ್ ಮಾಡಿದ ಆರೋಪವಿದ್ದು, ತಾನು ವಿದೇಶದಿಂದ ಅದನ್ನು ಪ್ರವೇಶಿಸಿದ್ದೇನೆ ಎಂದು ಮಹುವಾ ಹೇಳಿದ್ದಾರೆ.
ಆದರೆ ಇದಕ್ಕಾಗಿ ಯಾವುದೇ ನಗದು ವಿನಿಮಯ ನಡೆದಿಲ್ಲ, ಸಂಸದರಾಗುವ ಮುಂಚೆಯೇ ದರ್ಶನ್ ಅವರು ತನಗೆ ಸ್ಕಾರ್ಫ್, ಕೆಲವು ಮೇಕಪ್ ವಸ್ತುಗಳನ್ನು ನೀಡಿದ್ದರು ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ. ಅವರು ದೀರ್ಘಕಾಲದಿಂದ ತನ್ನ ಆಪ್ತ ಸ್ನೇಹಿತ ಎಂದು ವಿವರಿಸಿದ್ದಾರೆ. ಅದಾನಿ ಸಮೂಹವು ಈ ʼಬೋಗಸ್ ಆರೋಪʼಗಳ ಹಿಂದೆ ಇದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಹೇಳಿಕೊಂಡಿದ್ದಾರೆ. ಈ ಹಿಂದೆ ಅದಾನಿ ಸಮೂಹವನ್ನು ಮೋಯಿತ್ರಾ ಕಟುವಾಗಿ ಟೀಕಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಗುರಿಯಾಗಿಸಿಕೊಂಡು ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಪಡೆದ ಆರೋಪದಲ್ಲಿ ಮಹುವಾ ಮೊಯಿತ್ರಾ (Mahua Moitra) ಅವರಿಗೆ ಸಂಕಷ್ಟ ಎದುರಾಗಿದೆ. ನವೆಂಬರ್ 2ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಲೋಕಸಭೆಯ ನೈತಿಕ ಸಮಿತಿಯು (Lok Sabha Ethnics Committee) ಸಮನ್ಸ್ ಜಾರಿ ಮಾಡಿತ್ತು.
ನೈತಿಕ ಸಮಿತಿ ಎದುರು ಹಾಜರಾಗಲು ನವೆಂಬರ್ 5ರವರೆಗೆ ವಿನಾಯಿತಿ ಬೇಕು ಎಂದು ಮಹುವಾ ಮೊಯಿತ್ರಾ ಅವರು ಮನವಿ ಮಾಡಿದ್ದರು. ಕ್ಷೇತ್ರದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳ ಕಾರಣದಿಂದಾಗಿ ದಿನಾಂಕ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದರು. ಆದರೆ, ಲೋಕಸಭೆ ನೈತಿಕ ಸಮಿತಿಯು ನವೆಂಬರ್ 2ರಂದೇ ಹಾಜರಾಗಬೇಕು. ಬೇರೆ ದಿನಾಂಕ ನೀಡುವುದಿಲ್ಲ ಎಂದು ತಿಳಿಸಿತ್ತು. ಇದಕ್ಕೂ ಮೊದಲು ಅಕ್ಟೋಬರ್ 31ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸಮಿತಿ ಸೂಚಿಸಿತ್ತು.
ಇದನ್ನೂ ಓದಿ: Mahua Moitra: ಮಹುವಾ ಮೊಯಿತ್ರಾಗೆ ಸಂಕಷ್ಟ; ನ.2ಕ್ಕೆ ಹಾಜರಾಗಲು ನೈತಿಕ ಸಮಿತಿ ಆದೇಶ