ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅದಾನಿ ಗ್ರೂಪ್(Adani Group) ಗುರಿಯಾಗಿಸಿಕೊಂಡು ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ (Darshan Hiranandani) ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಹುವಾ ಮೊಯಿತ್ರಾ ಅವರು ನನಗೆ ಸಂಸತ್ ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್ ಕೊಟ್ಟಿದ್ದಾರೆ ಎಂದು ಉದ್ಯಮಿ ದರ್ಶನ್ ಹಿರಾನಂದನಿ ಅಫಿಡವಿಟ್ ಸಲ್ಲಿಸಿದ್ದಾರೆ.
ಸಂಸತ್ತಿನ ನೈತಿಕ ಸಮಿತಿಗೆ ದರ್ಶನ್ ಹಿರಾನಂದನಿ ಅವರು ಅಫಿಡವಿಟ್ ಸಲ್ಲಿಸಿದ್ದು, “ಮಹುವಾ ಮೊಯಿತ್ರಾ ಅವರು ನನಗೆ ಸಂಸತ್ತಿನ ಐಡಿ ಹಾಗೂ ಪಾಸ್‌ವರ್ಡ್ ಕೊಟ್ಟಿದ್ದರು. ಮಹುವಾ ಮೊಯಿತ್ರಾ ಅವರು ಕೇಳುವ ಪ್ರಶ್ನೆಗಳನ್ನು ನಾನು ಪೋಸ್ಟ್ ಮಾಡಲು ಐಡಿ-ಪಾಸ್‌ವರ್ಡ್ ಕೊಟ್ಟಿದ್ದರು” ಎಂಬುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. “ಮಹುವಾ ಮೊಯಿತ್ರಾ ಅವರು ಕ್ಷಿಪ್ರವಾಗಿ ರಾಷ್ಟ್ರ ರಾಜಕಾರಣದಲ್ಲಿ ಮಿಂಚಲು ಬಯಸಿದ್ದರು. ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ನಿಂದಿಸುವ ಮೂಲಕ ವೇಗವಾಗಿ ಜನಪ್ರಿಯತೆ ಗಳಿಸಲು ಗೆಳೆಯರಿಂದ ಸಲಹೆ ಪಡೆದಿದ್ದರು” ಎಂಬುದಾಗಿಯೂ ಉಲ್ಲೇಖಿಸಲಾಗಿದೆ.
ಮಹುವಾ ಮೊಯಿತ್ರಾ ಉತ್ತರವೇನು?
ದರ್ಶನ್ ಹಿರಾನಂದನಿ ಅವರ ಅಫಿಡವಿಟ್‌ಗೆ ಮಹುವಾ ಮೊಯಿತ್ರಾ ತಿರುಗೇಟು ನೀಡಿದ್ದಾರೆ. “ಖಾಲಿ ಬಿಳಿ ಹಾಳೆ ಮೇಲೆ ಸಹಿ ಹಾಕಿದ ಮಾತ್ರಕ್ಕೆ ಅದು ನಿಜವಾಗಿಲ್ಲ. ದರ್ಶನ್ ಹಿರಾನಂದನಿ ಅವರ ಲೆಟರ್‌ಹೆಡ್ ಇಲ್ಲ. ಅಷ್ಟಕ್ಕೂ, ಒಬ್ಬ ಉದ್ಯಮಿಯು ಏಕೆ ಖಾಲಿ ಹಾಳೆ ಮೇಲೆ ಸಹಿ ಹಾಕುತ್ತಾರೆ? ಅವರಿಂದ ಏನಾದರೂ ಗನ್ ಪಾಯಿಂಟ್‌ನಲ್ಲಿ ಸಹಿ ಹಾಕಿಸಿಕೊಳ್ಳಲಾಗಿದೆಯೇ” ಎಂದು ಪ್ರಶ್ನಿಸಿದ್ದಾರೆ.
Jai Ma Durga. pic.twitter.com/Z2JsqOARCR
— Mahua Moitra (@MahuaMoitra) October 19, 2023
ದುಬೆ ಆರೋಪ ಏನಾಗಿತ್ತು?
ಇಂಧನ ಮತ್ತು ಮೂಲಸೌಕರ್ಯಗಳ ಒಪ್ಪಂದವನ್ನು ಅದಾನಿ ಗ್ರೂಪ್ ಎದುರು ಪಡೆಯಲು ಹಿರಾನಂದನಿ ಪಡೆಯಲು ವಿಫಲವಾಗಿತ್ತು. ಹಾಗಾಗಿ, ಹಿರಾನಂದನಿ ವ್ಯಾಪಾರಿ ಹಿತಾಸಕ್ತಿಗೆ ಅನುಗುಣವಾಗಿ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ದುಬೆ ಅವರು ಆರೋಪಿಸಿದ್ದಾರೆ. ಅಲ್ಲದೇ, ಐಫೋನ್‌ನಂಥ ದುಬಾರಿ ಗಿಫ್ಟ್ ಮಾತ್ರವಲ್ಲದೇ, 2 ಕೋಟಿ ರೂಪಾಯಿ ಹಣವನ್ನು ಕಂಪನಿಯಿಂದ ಮಹುವಾ ಮೋಯಿತ್ರಾ ಪಡೆದುಕೊಂಡಿದ್ದಾರೆ. ಅಲ್ಲದೇ, ಚುನಾವಣೆಗೆ ಸ್ಪರ್ಧಿಸಲು ಹಿರಾನಂದಿನಿ ಕಂಪನಿ ಮೋಯಿತ್ರಾಗೆ 75 ಲಕ್ಷ ರೂಪಾಯಿ ನೀಡಿದೆ ಎಂದು ಆರೋಪಿಸಲಾಗಿದೆ. ಇದಕ್ಕೂ ಮೊದಲು ದುಬೆ ಆರೋಪವನ್ನು ದರ್ಶನ್ ಹಿರಾನಂದನಿ ಅಲ್ಲಗಳೆದಿದ್ದರು.