ಭಾರತ ಸ್ವತಂತ್ರ ದೇಶವಾಗಿ 76 ವಸಂತಗಳು (Independence Day 2023) ಪೂರ್ಣಗೊಂಡಿವೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹೋರಾಟದ ಫಲವಾಗಿ ನಮ್ಮ ದೇಶ ಬ್ರಿಟಿಷರ ಕೈವಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಅದಕ್ಕೆಂದು ದೇಶಾದ್ಯಂತ ಸ್ವಾತಂತ್ರ್ಯ ಹೋರಾಟಗಳನ್ನು ಹಲವಾರು ದಶಕಗಳ ಕಾಲ ನಡೆಸಲಾಗಿದೆ. ಎಷ್ಟೋ ಮಂದಿ ಈ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಸಿದ್ದಾರೆ. ದೇಶದ ಹಲವೆಡೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ರಕ್ತ ಚೆಲ್ಲಿದೆ. ಕರ್ನಾಟಕದ ಹಲವು ಸ್ಥಳಗಳು ಕೂಡ ಸ್ವಾತಂತ್ರ್ಯದ ಹೋರಾಟಕ್ಕೆ ಸಾಕ್ಷಿಯಾಗಿದ್ದವು. ಅಂತಹ ಸ್ಥಳಗಳ ವಿವರ ಇಲ್ಲಿದೆ.
ವಿದುರಾಶ್ವತ್ಥ: ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್
ಉತ್ತರ ಭಾರತದಲ್ಲಿರುವ ಜಲಿಯನ್ ವಾಲಾಬಾಗ್ ಬಗ್ಗೆ ನಿಮಗೆ ಗೊತ್ತೇ ಇದೆ. ಅದೇ ರೀತಿಯಲ್ಲಿ ದಕ್ಷಿಣ ಭಾರತದಲ್ಲೂ ಒಂದು ಜಲಿಯನ್ ವಾಲಾಬಾಗ್ ಇದೆ. ಅದು ಕರ್ನಾಟಕದ ಕೋ6ಲಾರ ಜಿಲ್ಲೆಯ ಗೌರಿಬಿದನೂರಿನಲ್ಲಿರುವ ವಿದುರಾಶ್ವತ್ಥದಲ್ಲಿದೆ. ಈ ಗ್ರಾಮ ಸ್ವತಂತ್ರ ಹೋರಾಟದ ಕಥೆಗಳಿಂದ ಹೆಸರುವಾಸಿಯಾಗಿದೆ. ಇಲ್ಲಿ 1938ರ ಏಪ್ರಿಲ್ 25ರಂದು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಗೋಲೀಬಾರ್ ನಡೆಸಲಾಯಿತು. ಆ ಸಮಯದಲ್ಲಿ ಸುಮಾರು 35ಕ್ಕೂ ಅಧಿಕ ದೇಶಭಕ್ತರು ಪ್ರಾಣ ಕಳೆದುಕೊಂಡರು. ಆ ನೆನಪಿಗಾಗಿ ಇಲ್ಲಿ 1973ರಲ್ಲಿ ಹುತಾತ್ಮರ ಸ್ಮಾರಕವನ್ನು ನಿರ್ಮಿಸಲಾಯಿತು. ಹುತಾತ್ಮರಾಗಿದ್ದವರ ಹೆಸರುಗಳನ್ನು ಸ್ಮಾರಕದಲ್ಲಿನ ಕಲ್ಲಿನ ಕಂಬಗಳ ಮೇಲೆ ಕೆತ್ತಲಾಗಿದೆ. ಈ ಸ್ಥಳ ಬೆಂಗಳೂರಿನಿಂದ 90 ಕಿ.ಮೀ ದೂರದಲ್ಲಿದೆ. ಬೆಂಗಳೂರಿಗರಿಗೆ ಇಲ್ಲಿಗೆ ಹೋಗುವುದಕ್ಕೆ ಸುಮಾರು 2 ಗಂಟೆ ಸಾಕಾಗುತ್ತದೆ.
ಮೈಸೂರು
ಈಗಿನ ಸಾಂಸ್ಕೃತಿಕ ನಗರಿಯಾಗಿರುವ ಮೈಸೂರು ಬ್ರಿಟಿಷರ ಕಾಲದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಳನ್ನು ಕಂಡಿತ್ತು. ಮೈಸೂರಿನ ಹುಲಿ ಎಂದು ಕರೆಸಿಕೊಳ್ಳುತ್ತಿದ್ದ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಅನೇಕ ಯುದ್ಧಗಳನ್ನು ನಡೆಸಿದ ಎಂದು ಇತಿಹಾಸದ ಪಾಠಗಳು ಹೇಳುತ್ತವೆ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಕಥೆಗಳನ್ನು ಹೇಳುವ ಅನೇಕ ಸ್ಥಳಗಳನ್ನು ಮೈಸೂರಿನ ಆಸುಪಾಸಿನಲ್ಲಿ ನೋಡಬಹುದಾಗಿದೆ.
ಬೆಳಗಾವಿ
ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯವಾಗಿ ಕೇಳಿಬರುವ ಹೆಸರು ಬೆಳಗಾವಿಯದ್ದು. ಇಲ್ಲಿನ ಚನ್ನಪ್ಪ ವಾಲಿ, ಅಣ್ಣು ಗುರೂಜಿ, ಗಂಗಾಧರ ರಾವ್ ದೇಶಪಾಂಡೆಯಂಥವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದರು. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ಕೂಡ ಈ ಬೆಳಗಾವಿಗೆ ಹಲವು ಭಾರಿ ಭೇಟಿ ಕೊಟ್ಟಿದ್ದರು. ಇಲ್ಲಿ ನಡೆದ ಅನೇಕ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರು.
ಮಂಗಳೂರು
ಮಂಗಳೂರು ಸ್ವಾತಂತ್ರ್ಯ ಹೋರಾಟಗಳ ಮುಖ್ಯ ಭೂಮಿಯಾಗಿತ್ತು. ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕಾರ್ನಾಡ್ ಸದಾಶಿವ ರಾವ್ ಅವರು ವಿಧವೆಯರು ಮತ್ತು ಬಡ ಮಹಿಳೆಯರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಹಿಳಾ ಸಭಾವನ್ನು ಸ್ಥಾಪಿಸಿದರು. ಮಹಾತ್ಮಾ ಗಾಂಧಿಯವರ ಸತ್ಯಾಗ್ರಹ ಚಳವಳಿಗೆ ಸ್ವಯಂಸೇವಕರಾಗಿ ಹೋದ ಕರ್ನಾಟಕದ ಮಂದಿಯಲ್ಲಿ ಅವರು ಮೊದಲಿಗರೆನಿಸಿಕೊಂಡವರು. ಅವರ ಸ್ಮರಣಾರ್ಥವಾಗಿಯೇ ಬೆಂಗಳೂರಿನಲ್ಲಿ ಸದಾಶಿವನಗರ ಎನ್ನುವ ಹೆಸರಿದೆ. ಹಾಗೆಯೇ ಮಂಗಳೂರಿನ ಕೆ ಎಸ್ ರಸ್ತೆಗೆ ಕಾರ್ನಾಡ್ ಸದಾಶಿವ ರಾವ್ ಎನ್ನುವ ಹೆಸರಿಡಲಾಗಿದೆ. ಅವರಷ್ಟೇ ಅಲ್ಲದೆ ಮಂಗಳೂರಿನ ಇನ್ನೂ ಅನೇಕರು ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿದ್ದರು. ಮಹಿಳಾ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಸ್ವಾತಂತ್ರ್ಯ ಬಂದ ನಂತರ ಅವರು ಮಹಿಳೆಯರಿಗಾಗಿ ಕರಕುಶಲ ಮತ್ತು ಕೈಮಗ್ಗ ಚಟುವಟಿಕೆಗಳನ್ನು ಉತ್ತೇಜಿಸಿ ಅವರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಸದೃಢವಾಗಿಸಿದರು.
ಕೊಡಗು
ಕೊಡಗಿನಲ್ಲಿರುವ ಸನ್ನಿ ಸೈಡ್ ಮ್ಯೂಸಿಯಂ ಕೊಡಗಿನ ಪ್ರವಾಸಿಗರ ಆಕರ್ಷಣೆಯೂ ಹೌದು. ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಹೇಳುವಂತಹ ಅನೇಕ ಸಾಮಗ್ರಿಗಳನ್ನು ನೀವು ಈ ವಸ್ತುಸಂಗ್ರಹಾಲಯದಲ್ಲಿ ನೋಡಬಹುದು. ಆರ್ಮಿ ಟ್ಯಾಂಕ್ ‘ಹಿಮ್ಮತ್’ ಮತ್ತು 1971 ರ ಇಂಡೋ-ಪಾಕಿಸ್ತಾನ ಯುದ್ಧದ MIG-21 ಮ್ಯೂಸಿಯಂನ ಪ್ರಮುಖ ಆಕರ್ಷಣೆಗಳಾಗಿವೆ. ಈ ವಸ್ತುಸಂಗ್ರಹಾಲಯದಲ್ಲಿ ಲೈಟ್ ಮೆಷಿನ್ ಗನ್ಸ್, ಮೀಡಿಯಂ ಮೆಷಿನ್ ಗನ್ ಮತ್ತು ಸ್ವಯಂ ಲೋಡಿಂಗ್ ರೈಫಲ್‌ಗಳು, 7.62, 303 ಬೋರ್ ರೈಫಲ್‌ಗಳು, ರಾಕೆಟ್ ಲಾಂಚರ್‌ಗಳು, 32 ಎಂಎಂ ರೈಫಲ್ ಮತ್ತು 38 ಎಂಎಂ ರೈಫಲ್‌ಗಳಿವೆ.
ಅಂಕೋಲಾ
ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಕೇಳಿ ಬರುವ ಮತ್ತೊಂದು ಮಹತ್ವದ ಹೆಸರು ಅಂಕೋಲಾ. 1930ರಲ್ಲಿ ಮಹಾತ್ಮಾ ಗಾಂಧಿಯವರು ದಂಡಿ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ ನಂತರ, ಕರ್ನಾಟಕದಲ್ಲಿದ್ದ ಕಾಂಗ್ರೆಸ್ಸಿಗರು ಕರಾವಳಿ ಭಾಗದಲ್ಲಿ ಸತ್ಯಾಗ್ರಹ ಒಂದನ್ನು ನಡೆಸಲು ನಿರ್ಧರಿಸಿದರು. ಕಾಂಗ್ರೆಸ್ ಮುಖಂಡ ಹನುಮಂತ ರಾವ್ ಕೌಜಲಗಿ ಕರಾವಳಿ ಭಾಗದ ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲವೇ ಸರಿಯಾದ ಸ್ಥಳವೆಂದು ನಿರ್ಧರಿಸಿದರು. ಇಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಳು ನಡೆದ ಹಿನ್ನೆಲೆ ಈ ಸ್ಥಳವನ್ನು ಕರ್ನಾಟಕದ ಬಾರ್ಡೋಲಿ ಎಂದೂ ಕರೆಯಲಾಗುತ್ತದೆ.
ಫ್ರಿಡಂ ಪಾರ್ಕ್
ಬೆಂಗಳೂರಿನಲ್ಲಿ ಈಗ ಎಲ್ಲ ಹೋರಾಟಗಳಿಗೆ ಸ್ಥಳವಾಗುವ ಫ್ರೀಡಂ ಪಾರ್ಕ್ 1866ರಲ್ಲಿ ಬ್ರಿಟಿಷ್ ಸರ್ಕಾರ ನಿರ್ಮಿಸಿದ ಸೆಂಟ್ರಲ್ ಜೈಲಾಗಿತ್ತು. ಸ್ವಾತಂತ್ರ್ಯ ಹೋರಾಟ ಹೆಚ್ಚಾದಗೆಲ್ಲ ಇಲ್ಲಿ ಕೂಡಿ ಹಾಕಲಾಗುತ್ತಿದ್ದ ಕೈದಿಗಳು ಅರ್ಥಾತ್ ಸ್ವಾತಂತ್ರ್ಯ ಹೋರಾಟಗಾರರ ಸಂಖ್ಯೆ ಹೆಚ್ಚಾಗುತ್ತಿತ್ತು. 2000ರ ಇಸವಿಯವರೆಗೂ ಇದನ್ನು ಸೆಂಟ್ರಲ್ ಜೈಲಾಗಿಯೇ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ನಂತರ ಅದನ್ನು ವಸ್ತು ಸಂಗ್ರಹಾಲಯವಾಗಿ ಬದಲಾಯಿಸಿ, ಫ್ರೀಡಂ ಪಾರ್ಕ್ ಎನ್ನುವ ಹೆಸರಿಡಲಾಯಿತು. ಫ್ರೀಡಂ ಪಾರ್ಕ್ ಇಂದು ಅತ್ಯಾಧುನಿಕ ಮಾಹಿತಿ ಕಾರಿಡಾರ್, ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿಯನ್ನು ಹೊಂದಿದೆ.