Site icon Vistara News

C-295 Planes | ಸೇನೆಗಾಗಿ ಸರಕು ಸಾಗಣೆ ವಿಮಾನ ಉತ್ಪಾದನೆ ಘಟಕಕ್ಕೆ ಮೋದಿ ಶಿಲಾನ್ಯಾಸ, ಆತ್ಮನಿರ್ಭರಕ್ಕೆ ಬಲ

Modi

ಗಾಂಧಿನಗರ: ಗುಜರಾತ್‌ನ ವಡೋದರಾದಲ್ಲಿ ಭಾರತದ ವಾಯುಪಡೆಗಾಗಿ ಸರಕು ಸಾಗಣೆ ವಿಮಾನಗಳನ್ನು ಉತ್ಪಾದಿಸುವ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ವಾಯುಪಡೆಗಾಗಿ ವಿಮಾನಗಳನ್ನು ಉತ್ಪಾದಿಸಲಾಗುತ್ತಿದ್ದು, ಇದು ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿದೆ ಎಂದು ಮೋದಿ ಹೇಳಿದ್ದಾರೆ. ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್ (Tata Advanced Systems-TASL)‌ ಸಿ-295 ವಿಮಾನಗಳನ್ನು (C-295 Planes) ವಡೋದರಾದ ಘಟಕದಲ್ಲಿ ಉತ್ಪಾದಿಸಲಿದೆ.

ಮೇಕ್‌ ಫಾರ್‌ ದಿ ಗ್ಲೋಬ್‌

ವಿಮಾನ ಉತ್ಪಾದನಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಮೋದಿ, “ಭಾರತದಲ್ಲಿ ಇದುವರೆಗೆ ‘ಮೇಕ್‌ ಇನ್‌ ಇಂಡಿಯಾ’ ಮಂತ್ರ ಇತ್ತು. ಈಗ ಭಾರತದಲ್ಲಿ ಜಗತ್ತಿಗಾಗಿ ಉತ್ಪಾದಿಸುವ ಸಮಯ ಬಂದಿದೆ (Make For The Globe). ಆತ್ಮನಿರ್ಭರ ಭಾರತ ಮಂತ್ರವು ಸಾಕಾರವಾಗುತ್ತಿದೆ. ಭಾರತವು ಔಷಧ, ಲಸಿಕೆಯನ್ನು ಮಾತ್ರ ಉತ್ಪಾದಿಸುತ್ತಿಲ್ಲ. ಬದಲಿಗೆ ರಕ್ಷಣಾ ವ್ಯವಸ್ಥೆಯಲ್ಲೂ ಆತ್ಮನಿರ್ಭರತೆ ಸಾಧಿಸುತ್ತಿದೆ. ಯುದ್ಧವಿಮಾನಗಳು, ಯುದ್ಧ ಟ್ಯಾಂಕರ್‌ಗಳು, ಯುದ್ಧನೌಕೆಗಳನ್ನು ಕೂಡ ಉತ್ಪಾದಿಸಲಾಗುತ್ತಿದೆ. ಈಗ ವಾಯುಪಡೆಗಾಗಿ ಸರಕು ಸಾಗಣೆ ವಿಮಾನಗಳನ್ನೂ ಉತ್ಪಾದಿಸುತ್ತಿರುವುದು ಆತ್ಮನಿರ್ಭರತೆಗೆ ಮತ್ತಷ್ಟು ಬಲ ಬಂದಂತಾಗಿದೆ” ಎಂದು ಹೇಳಿದರು.

ಏನಿದು ದೇಶೀಯ ಉತ್ಪಾದನೆ ಯೋಜನೆ?

2021ರ ಸೆಪ್ಟೆಂಬರ್‌ನಲ್ಲಿ ಏರ್‌ಬಸ್‌ ಡಿಫೆನ್ಸ್‌ ಹಾಗೂ ಸ್ಪೇನ್‌ನ ಸ್ಪೇಸ್‌ ಕಂಪನಿ ನಡುವಿನ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಇದರ ಅಡಿಯಲ್ಲಿ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ (TASL) ಹಾಗೂ ಸ್ಪೇನ್‌ನ ಸ್ಪೇಸ್‌ ಕಂಪನಿಗಳು ಜತೆಗೂಡಿ ಭಾರತದಲ್ಲಿ ಸಿ-295 ವಿಮಾನಗಳನ್ನು ಉತ್ಪಾದಿಸಲಿವೆ. ಒಪ್ಪಂದ ಪ್ರಕಾರ ನಾಲ್ಕು ವರ್ಷದಲ್ಲಿ ಸ್ಪೇನ್‌ ಭಾರತಕ್ಕೆ 16 ಸಿ-295 ವಿಮಾನಗಳನ್ನು ಪೂರೈಸಲಾಗುತ್ತದೆ. ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಸಂಸ್ಥೆಯು ಭಾರತದಲ್ಲಿಯೇ 40 ವಿಮಾನಗಳನ್ನು ಭಾರತದಲ್ಲಿಯೇ ಉತ್ಪಾದಿಸಲಿದೆ. ಇದಕ್ಕಾಗಿ ಒಟ್ಟು 21,935 ಕೋಟಿ ರೂ. ವ್ಯಯವಾಗಲಿದೆ.

ಇದನ್ನೂ ಓದಿ | Tejas Mk2 | ದೇಶೀಯ ತೇಜಸ್‌ ಯುದ್ಧ ವಿಮಾನಗಳಿಗೆ 16 ರಾಷ್ಟ್ರದಿಂದ ಬೇಡಿಕೆ, ಮೇಕ್‌ ಇನ್‌ ಇಂಡಿಯಾಗೆ ಬಲ

Exit mobile version