Site icon Vistara News

ಕ್ರಿಸ್‌ಮಸ್‌ ಆಚರಣೆಗಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕುಸಿತ; ಎಂಟು ಮಂದಿಗೆ ಗಂಭೀರ ಗಾಯ

Kerala Bridge Collapse

Makeshift bridge set up for Christmas celebration collapses in Kerala, 8 injured

ತಿರುವನಂತಪುರಂ: ಕೇರಳದಲ್ಲಿ ಕ್ರಿಸ್‌ಮಸ್‌ ಆಚರಣೆಗೆಂದು (Christmas Celebration) ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಕುಸಿದು ಎಂಟು ಮಂದಿ ಗಾಯಗೊಂಡಿದ್ದಾರೆ. ತಿರುವನಂತಪುರಂ ಜಿಲ್ಲೆಯ ಪೂವರ್‌ ಪ್ರದೇಶದಲ್ಲಿ ಸೋಮವಾರ (ಡಿಸೆಂಬರ್‌ 25) ರಾತ್ರಿ ಕ್ರೈಸ್ತ ಸಮುದಾಯದ ನೂರಾರು ಜನ ಕ್ರಿಸ್‌ಮಸ್‌ ಆಚರಣೆಗೆಂದು ಒಂದೆಡೆ ಸೇರಿದ್ದರು. ಇದೇ ವೇಳೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ (Makeshift Bridge) ಕುಸಿದ ಕಾರಣ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೇತುವೆ ಮೇಲೆ ಹೆಚ್ಚಿನ ಜನ ನಿಂತಿದ್ದ ಕಾರಣ ಕುಸಿದಿದೆ ಎಂದು ತಿಳಿದುಬಂದಿದೆ. ಗಾಯಗೊಂಡಿರುವ ಜನರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಎಲ್ಲ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಏಕಾಏಕಿ ಸೇತುವೆ ಕುಸಿದ ಕಾರಣ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಂಬುಲೆನ್ಸ್‌ ವ್ಯವಸ್ಥೆ ಮಾಡುವ ಜತೆಗೆ ಜನರನ್ನು ರಕ್ಷಿಸಿದರು ಎಂದು ಮೂಲಗಳು ತಿಳಿಸಿವೆ.

ಕ್ರೈಸ್ತರು ಜಾಸ್ತಿ ಸಂಖ್ಯೆಯಲ್ಲಿರುವ ಕೇರಳದಲ್ಲಿ ಸೋಮವಾರ ಸಂಭ್ರಮದಿಂದ ಕ್ರಿಸ್‌ಮಸ್‌ ಆಚರಣೆ ಮಾಡಲಾಗಿದೆ. ತಡರಾತ್ರಿವರೆಗೆ ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಕೇಕ್‌ ಕತ್ತರಿಸಿ ಕ್ರಿಸ್‌ಮಸ್‌ ಆಚರಣೆ ಮಾಡಿದ್ದಾರೆ. ಕೇರಳ ರಾಜಧಾನಿ ತಿರುವನಂತಪುರಂನಲ್ಲಿರುವ ಸೇಂಟ್‌ ಮೇರಿ ಸೈರೋ ಮಲಂಕರ ಕ್ಯಾಥೋಲಿಕ್‌ ಚರ್ಚ್‌, ಲ್ಯಾಟಿನ್‌ ಕ್ಯಾಥೋಲಿಕ್‌ ಆರ್ಚ್‌ಡೈಯೋಸಿಸ್‌ ಸೇರಿ ಬಹುತೇಕ ಚರ್ಚ್‌ಗಳಲ್ಲಿ ಕ್ರೈಸ್ತ ಸಮುದಾಯದವರು ಸಂಭ್ರಮದಿಂದ ಕ್ರಿಸ್‌ಮಸ್‌ ಆಚರಣೆ ಮಾಡಿದ್ದಾರೆ.

ಇದನ್ನೂ ಓದಿ: Murder Case: ಕ್ರಿಸ್‌ಮಸ್‌ ಪಾರ್ಟಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕ್ರೈಸ್ತ ಸಮುದಾಯದವರ ಜತೆಗೂಡಿ ಸೋಮವಾರ ಭರ್ಜರಿಯಾಗಿ ಕ್ರಿಸ್‌ಮಸ್‌ ಆಚರಣೆ ಮಾಡಿದ್ದಾರೆ. ದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ನರೇಂದ್ರ ಮೋದಿ ಅವರು ಕ್ರೈಸ್ತ ಸಮುದಾಯದ ಮುಖಂಡರು, ಪಾದ್ರಿಗಳು ಹಾಗೂ ಮಕ್ಕಳ ಜತೆ ಕ್ರಿಸ್‌ಮಸ್‌ ಆಚರಿಸಿದರು. ಹಾಗೆಯೇ, ಎಲ್ಲ ಕ್ರೈಸ್ತರಿಗೆ ಹಬ್ಬದ ಶುಭಾಶಯ ತಿಳಿಸಿದ ಮೋದಿ, ಯೇಸು, ಪೋಪ್‌ ಫ್ರಾನ್ಸಿಸ್‌ ಜತೆಗಿನ ಭೇಟಿಯ ಕ್ಷಣಗಳನ್ನು ಸ್ಮರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version