Site icon Vistara News

Divya Prabha: ವಿಮಾನದಲ್ಲಿ ಮಲಯಾಳಂ ನಟಿಗೆ ಕಿರುಕುಳ ಕೊಟ್ಟ ‌’ಕುಡುಕ’ ಪ್ರಯಾಣಿಕ; ಬಿತ್ತು ಕೇಸ್

Actress Divya Prabha

Malayalam Actress Divya Prabha Harassed By Drunk Passenger On Air India Flight, Files Complaint

ತಿರುವನಂತಪುರಂ: ಮಲಯಾಳಂ ನಟಿ ದಿವ್ಯಾ ಪ್ರಭಾ (Divya Prabha) ಅವರಿಗೆ ಹಾರುತ್ತಿದ್ದ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ. ಅಕ್ಟೋಬರ್‌ 9ರಂದು ಏರ್‌ ಇಂಡಿಯಾ ವಿಮಾನದಲ್ಲಿ (Air India) ನಟಿಯು ಮುಂಬೈನಿಂದ ಕೊಚ್ಚಿಗೆ ಆಗಮಿಸುತ್ತಿದ್ದರು. ಇದೇ ವೇಳೆ ಸಹ ಪ್ರಯಾಣಿಕನು ಕಿರುಕುಳ ನೀಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗೆಯೇ, ಇನ್‌ಸ್ಟಾಗ್ರಾಂನಲ್ಲಿ ಘಟನೆಯನ್ನು ವಿವರಿಸಿ ಪೋಸ್ಟ್‌ ಹಾಕಿದ್ದಾರೆ.

“ಏರ್‌ ಇಂಡಿಯಾ ವಿಮಾನದಲ್ಲಿ ಕಹಿ ಘಟನೆಯೊಂದು ನಡೆದಿದೆ. ಕಿಟಕಿ ಪಕ್ಕ ಕುಳಿತ ನನ್ನ ಬಳಿ ಬಂದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಅನುಚಿತವಾಗಿ ವರ್ತಿಸಿದ್ದಾನೆ. ನನ್ನ ಜತೆ ವಾದ ಮಾಡುವ ಜತೆಗೆ ಮೈಮುಟ್ಟಲು ಬಂದಿದ್ದಾನೆ. ಗಗನಸಖಿಯರಿಗೆ ಈ ವಿಷಯ ತಿಳಿಸಿದ ಬಳಿಕ ನನಗೆ ಬೇರೆ ಆಸನ ನೀಡಲಾಯಿತು. ವಿಮಾನದ ಸಿಬ್ಬಂದಿಗೆ ದೂರು ನೀಡಿದರೂ ಇದುವರೆಗೆ ಕಿರುಕುಳ ಮಾಡಿದವನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ, ನಾನು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದೇನೆ” ಎಂದು ನಟಿ ತಿಳಿಸಿದ್ದಾರೆ.

ದಿವ್ಯಾ ಪ್ರಭು ಅವರು ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಪ್ರಮುಖ ನಟಿಯಾಗಿದ್ದಾರೆ. ಇವರು ಫಹಾದ್‌ ಫಾಸಿಲ್‌ ನಟನೆಯ ‘ಮಲಿಕ್‌’, ‘ಟೇಕ್‌ಆಫ್‌’ ಜತೆಗೆ ‘ನಾನ್‌ ಸೆನ್ಸ್’‌, ‘ಇತಿಹಾಸ’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್‌ನಿಂದ ಬಿಹಾರದ ಪಟನಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅನುಚಿತವಾಗಿ ವರ್ತಿಸಿದ್ದ. ಪಟನಾ ವಿಮಾನ ನಿಲ್ದಾಣ ತಲುಪುತ್ತಲೇ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: Air India: ವಿಮಾನದಲ್ಲಿ ಕಾಲು ಮೇಲೆ ಬಿಸಿ ನೀರು ಚೆಲ್ಲಿದರು! ಸಹಾಯ ಮಾಡದೇ ಸುಮ್ಮನಿದ್ದ ಸಿಬ್ಬಂದಿ

ವಿಮಾನದಲ್ಲಿ ಸಿಬ್ಬಂದಿ ಜತೆ ಪ್ರಯಾಣಿಕರು ಅನುಚಿತವಾಗಿ ವರ್ತಿಸುವ, ಜಗಳವಾಡುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಕೆಲ ತಿಂಗಳ ಹಿಂದಷ್ಟೇ, ಲಂಡನ್‌ನಿಂದ ಮುಂಬೈ ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದರು. ಅವರ ಈ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಾಗಿತ್ತು.

ಇನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣ ಏರ್ ಇಂಡಿಯಾಗೆ ಸಂಸ್ಥೆಗೆ 30 ಲಕ್ಷ ರೂ. ದಂಡ ವಿಧಿಸಲಾಯಿತು. ನವೆಂಬರ್ 26 ರಂದು ನ್ಯೂಯಾರ್ಕ್-ದಿಲ್ಲಿ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬ ಪ್ರಯಾಣಿಕರು ಕುಡಿದ ಅಮಲಿನಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಈ ಪ್ರಕರಣ ಭಾರೀ ಸುದ್ದಿ ಮಾಡಿತ್ತು.

Exit mobile version