ಬಿಹಾರದ ನಳಂದ ಜಿಲ್ಲೆಯಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ಪರೀಕ್ಷೆ ಬರೆಯಲು ಹೋದ 12ನೇ ತರಗತಿ ವಿದ್ಯಾರ್ಥಿಯೊಬ್ಬ, ಆ ಪರೀಕ್ಷಾ ಕೇಂದ್ರದಲ್ಲಿಯೇ ಪ್ರಜ್ಞೆ ತಪ್ಪಿಬಿದ್ದಿದ್ದಾನೆ. ಇದರಲ್ಲಿ ವಿಚಿತ್ರ ಏನು ಬಂತು? ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದ್ದರೆ, ಉತ್ತರಕ್ಕಾಗಿ ಈ ಸ್ಟೋರಿ ಓದಿ..
ಆ ವಿದ್ಯಾರ್ಥಿಯ ಹೆಸರು ಮನೀಶ್ ಶಂಕರ್ ಪ್ರಸಾದ್. 17 ವರ್ಷದ ಈ ಹುಡುಗ ಗಣಿತ ಪರೀಕ್ಷೆ ಬರೆಯಲು ಸುಂದರ್ಗಢ್ನ ಬಿಹಾರ್ಶರೀಫ್ನಲ್ಲಿರುವ ಬ್ರೀಲಿಯಂಟ್ ಕಾನ್ವೆಂಟ್ ಸ್ಕೂಲ್ಗೆ ಹೋಗಿದ್ದ. ತನ್ನ ಹಾಲ್ಟಿಕೆಟ್ ನಂಬರ್ ಇರುವ ಕೊಠಡಿಗೆ ಹೋಗುತ್ತಿದ್ದಂತೆ ಆತ ಗಲಿಬಿಲಿಗೊಂಡಿದ್ದಾನೆ. ಕಾರಣ ಆ ಕೊಠಡಿಯಲ್ಲಿ ಇವನೊಬ್ಬನೇ ಹುಡುಗನಾಗಿದ್ದ, ಉಳಿದ 322 ಮಂದಿ ವಿದ್ಯಾರ್ಥಿನಿಯರೇ ಆಗಿದ್ದರು. ಕ್ಲಾಸ್ರೂಮಿನಲ್ಲಿ ಕಣ್ಣುಹಾಯಿಸಿದಲ್ಲೆಲ್ಲ ಹೆಣ್ಣುಮಕ್ಕಳೇ ಕಾಣಿಸುತ್ತಿದ್ದಂತೆ ಆತ ಫುಲ್ ನರ್ವಸ್ ಆಗಿ, ತಲೆಸುತ್ತು ಬಂದು ಬಿದ್ದು ಎಚ್ಚರ ತಪ್ಪಿ ಬಿದ್ದಿದ್ದಾನೆ.
ಕೂಡಲೇ ಬ್ರೀಲಿಯಂಟ್ ಕಾನ್ವೆಂಟ್ ಸ್ಕೂಲ್ ಸಿಬ್ಬಂದಿ ಬಂದು ಆತನನ್ನು ಸಾದರ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಮನೆಯವರಿಗೂ ವಿಷಯ ತಿಳಿಸಿದ್ದಾರೆ. ಬಳಿಕ ಆತನ ತಂದೆ-ಕೆಲವು ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿದ್ದಾರೆ. ಈ ವೇಳೆ ಹುಡುಗನ ಸಂಬಂಧಿಕರು ಶಾಲಾ ಆಡಳಿತದ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಮ್ಮನೆ ಹುಡುಗನನ್ನು ಹುಡುಗಿಯರೇ ತುಂಬಿರುವ ಕೊಠಡಿಯಲ್ಲಿ ಕೂರಿಸಿದ್ದಾರೆ. ಅದು ಇಡೀ ಕೇಂದ್ರದಲ್ಲೇ ಮುಖ್ಯಕೊಠಡಿ. ಎಲ್ಲರೂ ಹೆಣ್ಣುಮಕ್ಕಳೇ ಇದ್ದರು. ಇವನಿಗೆ ಅಲ್ಲಿ ಕಾಲಿಡುತ್ತಿದ್ದಂತೆ ಗಾಬರಿಯಾಗಿ ಬಿದ್ದಿದ್ದಾನೆ’ ಎಂದು ಆತನ ಮನೆಯವರು ಹೇಳಿದ್ದಾರೆ.
ಇದನ್ನೂ ಓದಿ: Hanuma vihari: ಮೂಳೆ ಮುರಿದರೂ ಬ್ಯಾಂಡೇಜ್ ಕಟ್ಟಿ ತಂಡದ ರಕ್ಷಣೆಗೆ ನಿಂತ ಹನುಮ ವಿಹಾರಿ; ವಿಡಿಯೊ ವೈರಲ್
ಆದರೆ ಈ ಹುಡುಗ ಕೂಡ ಎಡವಟ್ಟು ಮಾಡಿಕೊಂಡಿದ್ದಾನೆ. ತನ್ನ ಪರೀಕ್ಷಾ ಅರ್ಜಿಯಲ್ಲಿ ಲಿಂಗ ಎಂಬಲ್ಲಿ ಇದ್ದ ಕೆಟಗರಿಯಲ್ಲಿ ಈತ ಪುರುಷ (Male) ಎಂದು ಬರೆಯುವ ಬದಲು ಸ್ತ್ರೀ (Female) ಎಂದು ನಮೂದಿಸಿದ್ದ. ಹೀಗಾಗಿಯೇ ಅವನ ಹಾಲ್ ಟಿಕೆಟ್ ನಂಬರ್ ಕೂಡ ಹುಡುಗಿಯರಿಗಾಗಿ ಇರುವ ಕೊಠಡಿಯಲ್ಲೇ ಬಂದಿತ್ತು ಎಂದು ಹೇಳಲಾಗಿದೆ. ಅನಾರೋಗ್ಯದ ಕಾರಣಕ್ಕೆ ಮನೀಶ್ ಶಂಕರ್ ಪ್ರಸಾದ್ ಪರೀಕ್ಷೆ ಬರೆಯದೆ ವಾಪಸ್ ಆಗಿದ್ದಾನೆ.