ನವ ದೆಹಲಿ: ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿದ್ದ ಮಲ್ಲಿಕಾರ್ಜುನ್ ಖರ್ಗೆ ಅಕ್ಟೋಬರ್ 26ರಂದು ಎಐಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಅವರು ತಮ್ಮ ರಾಜ್ಯಸಭೆ ಪ್ರತಿಪಕ್ಷ ನಾಯಕನ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು. ಈ ಮೂಲಕ ಕಾಂಗ್ರೆಸ್ನ ‘ಒಬ್ಬ ವ್ಯಕ್ತಿ, ಒಂದೇ ಹುದ್ದೆ’ ತತ್ವಕ್ಕೆ ತಮ್ಮ ಬದ್ಧತೆಯನ್ನು ತೋರಿಸಿದ್ದರು.
ಆದರೆ ಈಗ ಇದು ಉಲ್ಟಾ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯಸಭೆ ಪ್ರತಿಪಕ್ಷನ ಸ್ಥಾನಕ್ಕೆ ಕಾಂಗ್ರೆಸ್ ಇನ್ಯಾರನ್ನೂ ನೇಮಕ ಮಾಡಿಲ್ಲ. ಹೀಗಿರುವಾಗ ಖರ್ಗೆಯವರೇ ಮತ್ತೆ ಆ ಸ್ಥಾನವನ್ನೂ ವಹಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅಂದರೆ ಮಲ್ಲಿಕಾರ್ಜುನ್ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನದ ಜತೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿಯೂ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ.
ಸೋನಿಯಾ ಗಾಂಧಿ ಸಭೆ
ರಾಜ್ಯಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ನೇಮಕಾತಿ ಸಂಬಂಧ ಚರ್ಚೆ ನಡೆಸಲು ಸೋನಿಯಾ ಗಾಂಧಿ ನೇತೃತ್ವದಲ್ಲಿ, ‘ಕಾಂಗ್ರೆಸ್ ಸಂಸದೀಯ ಪಕ್ಷದ ಕಾರ್ಯತಂತ್ರ ಸಭೆ ನಡೆದಿತ್ತು. ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ಕೆ.ಸಿ.ವೇಣುಗೋಪಾಲ್ ಮಾತ್ರ ಪಾಲ್ಗೊಂಡಿದ್ದರು. ರಾಜ್ಯಸಭಾ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಗಳಾದ ಪಿ.ಚಿದಂಬರಂಗೆ ಆಗಲೀ, ದಿಗ್ವಿಜಯ ಸಿಂಗ್ಗೆ ಆಗಲೀ ಸಭೆಗೆ ಆಹ್ವಾನವೇ ಇರಲಿಲ್ಲ ಎಂದೂ ಮೂಲಗಳು ತಿಳಿಸಿದ್ದು, ಇದು ಅಚ್ಚರಿಗೆ ಕಾರಣವಾಗಿದೆ.
ಕೆಲ ತಿಂಗಳುಗಳ ಹಿಂದೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ‘ಒಬ್ಬರಿಗೆ ಒಂದೇ ಹುದ್ದೆ’ ಎಂಬ ನಿರ್ಣಯವನ್ನು ಅಂಗೀಕಾರ ಮಾಡಲಾಗಿದೆ. ಈ ನಿರ್ಣಯಕ್ಕೆ ಎಲ್ಲರೂ, ಸಾರ್ವಕಾಲಿಕವಾಗಿ ಬದ್ಧರಾಗಿರಬೇಕು ಎಂಬುದು ರಾಹುಲ್ ಗಾಂಧಿಯವರ ಆಶಯ. ಎಐಸಿಸಿ ಅಧ್ಯಕ್ಷ ಹುದ್ದೆ ಚುನಾವಣೆ ಸ್ಪರ್ಧೆಯಿಂದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹಿಂದೆ ಸರಿಯಲು ಕಾರಣವಾಗಿದ್ದೇ ಈ ‘ಏಕ ವ್ಯಕ್ತಿ, ಏಕ ಹುದ್ದೆ’ ಎಂಬ ನಿಯಮ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೀರಿ ಎಂದಾದರೆ, ನೀವು ರಾಜಸ್ಥಾನ ಸಿಎಂ ಸ್ಥಾನ ತೊರೆಯಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಗೆಹ್ಲೋಟ್ಗೆ ಹೇಳಿದ್ದರಿಂದಲೇ ಅವರು ಸ್ಪರ್ಧೆಯಿಂದ ಹಿಂದೆ ಸರಿದರು ಮತ್ತು ಸೋನಿಯಾ ಗಾಂಧಿ ಕುಟುಂಬಕ್ಕೆ ಅಷ್ಟು ಆಪ್ತರಾಗಿದ್ದ ಅವರು ಬಂಡಾಯ ಕೂಡ ವ್ಯಕ್ತಪಡಿಸಿದ್ದು ಗೊತ್ತೇ ಇದೆ. ಎರಡೂ ಸ್ಥಾನವನ್ನು ನಿಭಾಯಿಸಲು ಅವಕಾಶ ಕೊಡಬೇಕು ಎಂಬುದು ಅವರ ಬೇಡಿಕೆಯಾಗಿತ್ತು.
ವಸ್ತು ಸ್ಥಿತಿ ಹೀಗೆಲ್ಲ ಇರುವಾಗ ಕಾಂಗ್ರೆಸ್ ಈಗ ಮಲ್ಲಿಕಾರ್ಜುನ್ ಖರ್ಗೆಗೆ ಮತ್ತೆ ರಾಜ್ಯಸಭೆ ಪ್ರತಿಪಕ್ಷ ನಾಯಕನ ಸ್ಥಾನವನ್ನು ಕೊಟ್ಟು, ಒಬ್ಬರಿಗೆ ಒಂದೇ ಹುದ್ದೆ ನಿಯಮ ಉಲ್ಲಂಘನೆ ಮಾಡುತ್ತದೆಯಾ? ಗೆಹ್ಲೋಟ್ ಸೇರಿ, ಇನ್ನೂ ಹಲವರ ಬಂಡಾಯಕ್ಕೆ ಇದು ಕಾರಣವಾಗುತ್ತದೆಯಾ? ಕಾದು ನೋಡಬೇಕಷ್ಟೇ.