Site icon Vistara News

Congress President | ಮಲ್ಲಿಕಾರ್ಜುನ ಖರ್ಗೆಯೇ ಕಾಂಗ್ರೆಸ್​​ನ ಮುಂದಿನ ಅಧ್ಯಕ್ಷ?; ದಿಗ್ವಿಜಯ ಸಿಂಗ್​ ಹೊರಕ್ಕೆ!

Mallikarjun Kharge likely to be President Says Congress Source

ನವ ದೆಹಲಿ: ಕಾಂಗ್ರೆಸ್​ ಅಧ್ಯಕ್ಷ (Congress President) ಚುನಾವಣೆಯ ಆಖಾಡಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೊನೇ ಕ್ಷಣದಲ್ಲಿ ಧುಮುಕಿದ್ದಾರೆ. ಖರ್ಗೆ ಇಂದು ಮಧ್ಯಾಹ್ನ 12.30ರ ಹೊತ್ತಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹಾಗೇ, ಇವರನ್ನು ಆಯ್ಕೆ ಮಾಡಿದ್ದೇ ಕಾಂಗ್ರೆಸ್​ ಹೈಕಮಾಂಡ್ ಎಂದೂ ಹೇಳಲಾಗಿದೆ. ಅಕ್ಟೋಬರ್​ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಸೆ.24ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇಂದು ಕೊನೇದಿನ. ಅಭ್ಯರ್ಥಿಗಳು ಇಂದು ಮಧ್ಯಾಹ್ನ 3ಗಂಟೆಯೊಳಗೆ ತಮ್ಮ ನಾಮಪತ್ರ ಸಲ್ಲಿಸಬೇಕು.

ತಿರುವನಂತಪುರಂ ಸಂಸದ ಶಶಿ ತರೂರ್​ ಮತ್ತು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್​ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿತ್ತು. ಆದರೆ ಈಗ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್​ ಇಬ್ಬರೇ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ, ದಿಗ್ವಿಜಯ ಸಿಂಗ್​ ಕಣದಿಂದ ಹಿನ್ನಡೆಯುತ್ತಾರೆ ಎಂಬ ಒಂದು ವರದಿಯೂ ಬಂದಿದೆ. ದಿಗ್ವಿಜಯ ಸಿಂಗ್​ ಅವರು ಈಗಾಗಲೇ ಮಲ್ಲಿಕಾರ್ಜುನ್​ ಖರ್ಗೆ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​ ಅವರನ್ನು ಭೇಟಿಯಾಗಿದ್ದಾರೆ. ಆದರೆ ಈ ಮೂವರ ಮಧ್ಯೆ ಏನು ವಿಷಯ ಚರ್ಚೆಯಾಗಿದೆ ಎಂಬ ಬಗ್ಗೆ ವಿವರ ಹೊರಬಿದ್ದಿಲ್ಲ. ದಿಗ್ವಿಜಯ್​ ಸಿಂಗ್ ಬದಲಿಗೆ ಮಲ್ಲಿಕಾರ್ಜುನ​ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ, ಖರ್ಗೆಯನ್ನೇ ಕಾಂಗ್ರೆಸ್​​ನ ಮುಂದಿನ ಅಧ್ಯಕ್ಷರನ್ನಾಗಿ ಮಾಡಿ, ಅವರ ರಾಜೀನಾಮೆಯಿಂದ ತೆರವಾದ ರಾಜ್ಯಸಭೆಯ ಪ್ರತಿಪಕ್ಷನ ಸ್ಥಾನಕ್ಕೆ ದಿಗ್ವಿಜಯ್​ ಸಿಂಗ್​ರನ್ನು ಏರಿಸುವ ಪ್ರಯತ್ನ ಕಾಂಗ್ರೆಸ್​​ನಲ್ಲಿ ಸದ್ಯ ಚಾಲ್ತಿಯಲ್ಲಿದೆ ಎಂದೂ ಹೇಳಲಾಗಿದೆ.

ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜಿ 23 ನಾಯಕರಾದ ಮನೀಶ್​ ತಿವಾರಿ, ಪ್ರಥ್ವಿರಾಜ್​ ಚೌಹಾಣ್​ ಕೂಡ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಗುರುವಾರ ರಾತ್ರಿ ಹಿರಿಯ ನಾಯಕ ಆನಂದ್​ ಶರ್ಮಾ ಮನೆಯಲ್ಲಿ, ಜಿ 23 ನಾಯಕರ ಸಭೆಯೊಂದು ನಡೆದ ಬಳಿಕ, ಈ ವಾದ ಬಲವಾಗಿತ್ತು. ಆದರೆ ಇದೀಗ ಕಾಂಗ್ರೆಸ್​ ಮೂಲಗಳಿಂದ ಬಂದ ವರದಿಯ ಪ್ರಕಾರ ‘ಜಿ 23 ನಾಯಕರು ಯಾರೂ ನಾಮಪತ್ರ ಸಲ್ಲಿಸುವುದಿಲ್ಲ’ ಎಂದು ಹೇಳಲಾಗಿದೆ.

ಇದನ್ನೂ ಓದಿ: Congress President | ಗಾಂಧಿ ಕುಟುಂಬದವರ ಸ್ಪರ್ಧೆ ಇಲ್ಲ, ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ?

Exit mobile version