Site icon Vistara News

Cong Prez Poll | ರಾಜ್ಯಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ

Mallikarjun Kharge 1

ನವ ದೆಹಲಿ: ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ, ಸೆ.30ರಂದು ನಾಮಪತ್ರ ಸಲ್ಲಿಸಿರುವ ಮಲ್ಲಿಕಾರ್ಜುನ್ ಖರ್ಗೆ ಇಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್​ ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆಸಿದ್ದ ಚಿಂತನಾ ಶಿಬಿರದಲ್ಲಿ ‘ಒಬ್ಬ ವ್ಯಕ್ತಿ, ಒಂದೇ ಹುದ್ದೆ’ ಎಂಬ ನಿರ್ಣಯ ಅಂಗೀಕಾರ ಮಾಡಿದೆ. ಈ ನಿಯಮಕ್ಕೆ ಎಲ್ಲರೂ ಸದಾ ಬದ್ಧರಾಗಿ ಇರಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದೇ ಕಾರಣಕ್ಕೇ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಕೂಡ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವಂತಾಯ್ತು.

ಈಗ ಮಲ್ಲಿಕಾರ್ಜುನ್​ ಖರ್ಗೆ ಕಾಂಗ್ರೆಸ್​​ನ ‘ಒಬ್ಬ ವ್ಯಕ್ತಿ, ಒಂದು ಹುದ್ದೆ’ ನಿಯಮ ಪಾಲನೆಗೆ ಬದ್ಧರಾಗಿ, ತಮ್ಮ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ್​ ಖರ್ಗೆ ರಾಜೀನಾಮೆ ಪತ್ರವನ್ನು ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್ ಅಧ್ಯಕ್ಷನ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆ.30 ಕೊನೇದಿನವಾಗಿತ್ತು. ಶಶಿ ತರೂರ್​ ಮತ್ತು ದಿಗ್ವಿಜಯ ಸಿಂಗ್​ ಸ್ಪರ್ಧಿಸುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಕೊನೇ ದಿನವಾದ ನಿನ್ನೆ ಮಲ್ಲಿಕಾರ್ಜುನ​ ಖರ್ಗೆ ಚುನಾವಣಾ ಕಣಕ್ಕೆ ಇಳಿದಿದ್ದರು. ದಿಗ್ವಿಜಯ ಸಿಂಗ್​ ಹಿಂದೆ ಸರಿದಿದ್ದರು. ಇದೀಗ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆಯಿಂದ ತೆರವಾದ ರಾಜ್ಯಸಭೆ ಪ್ರತಿಪಕ್ಷ ನಾಯಕನ ಸ್ಥಾನ ದಿಗ್ವಿಜಯ ಸಿಂಗ್​ ಅಥವಾ ಪಿ.ಚಿದಂಬರಂ ಪಾಲಾಗಲಿದೆ ಎಂದು ಹೇಳಲಾಗಿದೆ.

ಅಕ್ಟೋಬರ್​ 17ರಂದು ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಶಿ ತರೂರ್​, ಮಲ್ಲಿಕಾರ್ಜುನ್​ ಖರ್ಗೆ ಮತ್ತು ಕೆ.ಎನ್​.ತ್ರಿಪಾಠಿ ಸ್ಪರ್ಧಿಸಲಿದ್ದಾರೆ. ಜಿ23 ನಾಯಕರಾದ ಮನೀಶ್​ ತಿವಾರಿ, ಭೂಪಿಂದರ್ ಹೂಡಾ, ಪ್ರಥ್ವಿರಾಜ್​ ಚೌಹಾಣ್​, ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್, ದಿಗ್ವಿಜಯ ಸಿಂಗ್​ ಮತ್ತಿತರರು ಈಗಾಗಲೇ ಖರ್ಗೆಗೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: Congress President | ಮಲ್ಲಿಕಾರ್ಜುನ ಖರ್ಗೆಯೇ ಕಾಂಗ್ರೆಸ್​​ನ ಮುಂದಿನ ಅಧ್ಯಕ್ಷ?; ದಿಗ್ವಿಜಯ ಸಿಂಗ್​ ಹೊರಕ್ಕೆ!

Exit mobile version