ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ವಾತಂತ್ರ್ಯ ದಿನಾಚರಣೆ (Independence Day) ಹಿನ್ನೆಲೆಯಲ್ಲಿ ಕೆಂಪು ಕೋಟೆಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ಕುರಿತು ಭಾರಿ ಚರ್ಚೆಯಾಗಿದೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಕೆಂಪು ಕೋಟೆಯಲ್ಲಿ ಆಸನ ಮೀಸಲಿದ್ದರೂ, ಅವರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತ್ರ ಪಾಲ್ಗೊಂಡಿರುವುದಕ್ಕೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಇದು ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.
ಖರ್ಗೆ ಗೈರಾಗಲು ಕಾರಣವೇನು?
ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ವಿಡಿಯೊ ಟ್ವೀಟ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ, “ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು” ಎಂದು ತಿಳಿಸಿದ್ದರು. ಇದಾದ ಬಳಿಕ ಅನಾರೋಗ್ಯದ ಕಾರಣ ಅವರು ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಎಂದು ಹೇಳಲಾಗಿತ್ತು. ಹಾಗಾಗಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹುಷಾರಿಲ್ಲವೇನೋ ಎಂದು ಎಲ್ಲರೂ ಸುಮ್ಮನಾಗಿದ್ದರು. ಆದರೆ, ಯಾವಾಗ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ವಿಡಿಯೊ ಹರಿದಾಡಿತೋ, ಆಗ ಬಿಜೆಪಿಯು ಆಕ್ರೋಶ ವ್ಯಕ್ತಪಡಿಸಿತು.
ಮಲ್ಲಿಕಾರ್ಜುನ ಖರ್ಗೆ ವಿಡಿಯೊ
ಬಿಜೆಪಿ ಅಸಮಾಧಾನ
ಮಲ್ಲಿಕಾರ್ಜುನ ಖರ್ಗೆ ಅವರು ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಬಿಟ್ಟು, ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ಪ್ರಸ್ತಾಪಿಸಿ ಬಿಜೆಪಿ ತಿರುಗೇಟು ನೀಡಿದೆ. “ಕಾಂಗ್ರೆಸ್ ಮೂಲಗಳ ಪ್ರಕಾರ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹುಷಾರಿಲ್ಲ ಎಂದು ತಿಳಿದುಬಂದಿದೆ. ಆದರೆ, ಅವರು ಎಐಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಇಷ್ಟೊಂದು ಬೇಗ ಗುಣಮುಖರಾಗಿದ್ದು ಸಮಾಧಾನ ತಂದಿದೆ” ಎಂದು ಬಿಜೆಪಿಯ ಶೆಹಜಾದ್ ಪೂನಾವಾಲಾ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ಖರ್ಗೆ
ಬಳಿಕ ಖರ್ಗೆ ಕೊಟ್ಟ ಸ್ಪಷ್ಟನೆ ಏನು?
ಕೆಂಪುಕೋಟೆಯ ಕಾರ್ಯಕ್ರಮಕ್ಕೆ ಗೈರಾಗಿ, ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕುರಿತು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. “ನರೇಂದ್ರ ಮೋದಿ ತೆರಳುವ ಮುನ್ನ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು. ಬಿಗಿ ಬಂದೋಬಸ್ತ್ ಕೂಡ ಒದಗಿಸಲಾಗಿತ್ತು. ನಾನು ಸರಿಯಾದ ಸಮಯಕ್ಕೆ ತೆರಳಲು ಆಗುವುದಿಲ್ಲ ಎಂದು ಹೋಗಲಿಲ್ಲ” ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.