Site icon Vistara News

Mallikarjuna Kharge: ಪ್ರಧಾನಿ ಮೋದಿ ವಡೋದರಾ ಬಿಟ್ಟು ವಾರಣಾಸಿಗೆ ಓಡಲಿಲ್ಲವೇ?; ಖರ್ಗೆ ಕಿಡಿ

Mallikarjuna Kharge

ನವದೆಹಲಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ(Rahul Gandhi) ಅಮೇಥಿ ಕ್ಷೇತ್ರ ಬಿಟ್ಟು ರಾಯ್‌ ಬರೇಲಿ(Rae bareli)ಯಲ್ಲಿ ಕಣಕ್ಕಿಳಿದಿರುವ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿ(BJP) ವಾಗ್ದಾಳಿ ನಡೆಸುತ್ತಿದೆ. ಇನ್ನು ರಾಹುಲ್‌ ಗಾಂಧಿ ಭಯಪಟ್ಟು ಅಮೇಥಿ ಬಿಟ್ಟು ಓಡಿದ್ದಾರೆ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ(Narendra Modi) ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಕಿಡಿ ಕಾರಿದ್ದಾರೆ. ಬಿಜೆಪಿ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಲಾಲ್‌ ಕೃಷ್ಣ ಆಡ್ವಾಣಿ ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸಿರಲಿಲ್ಲವೇ? ಎಂದು ವಾಗ್ದಾಳಿ ನಡೆಸಿದ್ದಾರೆ.

ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿರುವ ರಾಹುಲ್‌ ಗಾಂಧಿ ಇದೀಗ ರಾಯ್‌ ಬರೇಲಿಯಿಂದಲೂ ಸ್ಪರ್ಧಿಸುತ್ತಿದ್ದಾರೆ. ಎರಡು ಕ್ಷೇತ್ರಗಳಿಂದ ಕಣಕ್ಕಿಳಿದಿರುವ ಬಗ್ಗೆಯೂ ಪ್ರಧಾನಿ ಮೋದಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, 2014ರಲ್ಲಿ ಸ್ವತಃ ಪ್ರಧಾನಿ ಮೋದಿಯೇ ವಡೋದರಾ ಮತ್ತು ವಾರಣಾಸಿ ಕ್ಷೇತ್ರಗಳಿಂದ ಸ್ಪರ್ಧಿಸಿರಲಿಲ್ಲವೇ? ಬಳಿಕ ವಡೋಧರಾ ಕ್ಷೇತ್ರದಿಂದ ವಾರಣಾಸಿಗೆ ಓಡಿ ಹೋಗಿರಲಿಲ್ಲವೇ ಎಂದು ಟಾಂಗ್‌ ಕೊಟ್ಟರು. ಪ್ರಧಾನಿ ಮೋದಿ ಕೂಡ ಭಯದಿಂದಲೇ ವಾರಣಾಸಿಗೆ ಓಡಿ ಹೋಗಿದ್ದೇ? ಒಬ್ಬ ಪ್ರಧಾನಿಯಾಗಿ ಇಂತಹ ಟೀಕೆಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ʼʼರಾಹುಲ್​ ಗಾಂಧಿ ಅಮೇಥಿ ಬಿಟ್ಟು ರಾಯ್​ಬರೇಲಿಗೆ ಓಡಿದ್ದಾರೆ. ಭಯ ಪಡಬೇಡಿ, ಓಡಬೇಡಿʼʼ ಎಂದು ತಮಾಷೆ ಮಾಡಿದ್ದಾರೆ. ವಯನಾಡಿನಲ್ಲಿ ಮತದಾನ ಮುಗಿದ ತಕ್ಷಣ ರಾಹುಲ್‌ ಗಾಂಧಿ ಬೇರೆ ಕ್ಷೇತ್ರವನ್ನು ಹುಡುಕಲಿದ್ದಾರೆ ಎಂದು ತಾವು ಹಿಂದೆ ಹೇಳಿದ್ದನ್ನು ನೆನಪಿಸಿಕೊಂಡ ಮೋದಿ, ʼʼವಯನಾಡಿನಲ್ಲಿ ರಾಹುಲ್‌ ಗಾಂಧಿ ಸೋಲುತ್ತಾರೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಮತದಾನ ಮುಗಿದ ತಕ್ಷಣ ಅವರು ಬೇರೆ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದೆ. ಅದು ನಿಜವಾಗಿದೆ. ಅಮೇಥಿಯಲ್ಲಿ ಸೋಲಾಗುತ್ತದೆ ಎನ್ನುವ ಭೀತಿಯಿಂದ ರಾಯ್‌ ಬರೇಲಿಗೆ ಪಲಾಯನ ಮಾಡಿದ್ದಾರೆ. ಹೆದರಬೇಡಿ, ಓಡಬೇಡಿʼʼ ಎಂದು ಹೇಳಿದ್ದಾರೆ.

ನಿರಂತರವಾಗಿ ಆಯ್ಕೆಯಾಗುತ್ತಿದ್ದ ರಾಯ್‌ ಬರೇಲಿ ಕ್ಷೇತ್ರವನ್ನು ಬಿಟ್ಟು ರಾಜ್ಯಸಭೆಯತ್ತ ಮುಖ ಮಾಡಿದ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ನಡೆಯನ್ನೂ ಮೋದಿ ಟೀಕಿಸಿದ್ದಾರೆ. ʼʼಕಾಂಗ್ರೆಸ್‌ನ ಹಿರಿಯ ನಾಯಕಿ ಚುನಾವಣೆಯಲ್ಲಿ ಸ್ಪರ್ಧಿಸಲು ಭಯಪಡುತ್ತಾರೆ ಮತ್ತು ಕಣದಿಂದ ಓಡಿ ಹೋಗುತ್ತಾರೆ ಎನ್ನುವ ವಿಚಾರವನ್ನು ನಾನು ಮೊದಲೇ ಪಾರ್ಲಿಮೆಂಟ್‌ನಲ್ಲಿ ಹೇಳಿದ್ದೆ. ಅದರಂತೆ ಅವರು (ಸೋನಿಯಾ ಗಾಂಧಿ) ರಾಯ್‌ ಬರೇಲಿಯಿಂದ ರಾಜ್ಯಸಭೆಗೆ ಪಲಾಯನ ಮಾಡಿದ್ದಾರೆʼʼ ಎಂದು ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. ರಾಯ್‌ ಬರೇಲಿ ಮತ್ತು ಅಮೇಥಿಯಲ್ಲಿ ಮೇ 20ರಂದು ಮತದಾನ ನಡೆಯಲಿದೆ.

ಇದನ್ನೂ ಓದಿ: Viral News: ಹೆರಿಗೆಯಾದ ಮೂರು ಗಂಟೆಗಳಲ್ಲೇ ಅಪಾರ್ಟ್‌ಮೆಂಟ್‌ ಮೇಲಿಂದ ಮಗುವನ್ನೇ ಎಸೆದ್ಳಾ?

ರಾಯ್‌ ಬರೇಲಿ ಮತ್ತು ಅಮೇಥಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ವಿಚಾರ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿತ್ತು. ಕೊನೆಗೂ ಇಂದು ಕಾಂಗ್ರೆಸ್‌ ಪಟ್ಟಿ ಬಿಡುಗಡೆ ಮಾಡಿತ್ತು. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಖಾಲಿಯಾಗಿರುವ ರಾಯ್‌ ಬರೇಲಿ ಕ್ಷೇತ್ರದಿಂದ ಮೊದಲಿಗೆ ಪ್ರಿಯಾಂಕಾ ಗಾಂಧಿ ವಾಧ್ರಾ ಹಾಗೂ ಅಮೇಥಿಯಿಂದ ರಾಹುಲ್‌ ಗಾಂಧಿ ಕಣಕ್ಕಿಳಿಯುತ್ತಾರೆ ಎಂಬ ವಿಚಾರ ಹರಿದಾಡುತ್ತಿತ್ತು. ಇದೀಗ ಕುತೂಹಲಕ್ಕೆ ತೆರೆ ಬಿದ್ದಿದೆ. ಇತ್ತ ರಾಯ್‌ ಬರೇಲಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಬಿಜೆ ದಿನೇಶ್‌ ಪ್ರತಾಪ್‌ ಅವರನ್ನು ಕಣಕ್ಕಿಳಿಸಿದೆ.

Exit mobile version