Site icon Vistara News

ಪಾರ್ಥ ಚಟರ್ಜಿ ಬಂಧನಕ್ಕೆ ವೈಯಕ್ತಿಕವಾಗಿ ನೋವಾಗಿದೆ ಎಂದ ಮಮತಾ ಬ್ಯಾನರ್ಜಿ

mamatha banarjee

ಕೋಲ್ಕತಾ: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಚಿವ ಪಾರ್ಥ ಚಟರ್ಜಿ ಬಂಧನಕ್ಕೀಡಾಗಿರುವುದರಿಂದ ವೈಯಕ್ತಿಕವಾಗಿ ನೋವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

” ಪಾರ್ಥ ಚಟರ್ಜಿ ಇಂಥ ಕೆಲಸ ಮಾಡುತ್ತಾರೆ ಎಂದು ನನಗೆ ನಂಬಲೂ ಆಗುತ್ತಿಲ್ಲʼʼ ಎಂದು ಮಮತಾ ಬ್ಯಾನರ್ಜಿ ತಮಗೆ ಆಗಿರುವ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ” ಇವೆಲ್ಲದರ ಹಿಂದೆ ಯಾವುದಾದರೂ ಷಡ್ಯಂತ್ರ ಇರಲಿಕ್ಕಿಲ್ಲ ಎಂದು ನಮಗೆ ಹೇಗೆ ಗೊತ್ತಾಗುತ್ತದೆ? ಆದರೆ ನಾನು ಮಾಧ್ಯಮಗಳ ವಿಚಾರಣೆಯನ್ನು ಬಯಸುವುದಿಲ್ಲ. ಯಾರೇ ತಪ್ಪು ಮಾಡಿದ್ದರೂ ಕಾನೂನು ಕ್ರಮ ಎದುರಿಸಲಿ, ನಾನು ಭ್ರಷ್ಟಾಚಾರವನ್ನು ಬೆಂಬಲಿಸುವುದಿಲ್ಲʼʼ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಜಾರಿ ನಿರ್ದೇಶನಾಲಯವು ಸಚಿವ ಪಾರ್ಥ ಚಟರ್ಜಿಯನ್ನು ಬಂಧಿಸಿದ ಎರಡು ದಿನಗಳ ಬಳಿಕ ಮಮತಾ ಬ್ಯಾನರ್ಜಿ ತಮ್ಮ ಮೌನ ಮುರಿದಿದ್ದಾರೆ. ಪಾರ್ಥ ಚಟರ್ಜಿಯ ಆಪ್ತರಾದ ಅರ್ಪಿತಾ ಮುಖರ್ಜಿಯ ಮನೆಯಲ್ಲಿ ೨೧ ಕೋಟಿ ರೂ. ನಗದನ್ನು ಜಪ್ತಿ ಮಾಡಿದ ಬಳಿಕ ಜಾರಿ ನಿರ್ದೇಶನಾಲಯ ತನಿಖೆಯನ್ನು ಚುರುಕುಗೊಳಿಸಿ ಸಚಿವರನ್ನೂ ಬಂಧಿಸಿತ್ತು.

ಸಿಎಂ ಆಗಿ ೨ ಲಕ್ಷ ಸಂಬಳ ತೆಗೆದುಕೊಳ್ಳಬಹುದು, ಆದರೆ ಪಡೆಯುವುದಿಲ್ಲ

” ನಾನು ಮಾಜಿ ಸಂಸದೆಯಾಗಿ ೧ ಲಕ್ಷ ರೂ. ಪಿಂಚಣಿ ಪಡೆಯುತ್ತೇನೆ. ಸಿಎಂ ಆಗಿ ತಿಂಗಳಿಗೆ ೨ ಲಕ್ಷ ರೂ. ಸಂಬಳ ಪಡೆಯಬಹುದು. ಆದರೆ ಅದನ್ನು ತೆಗೆದುಕೊಳ್ಳುವುದಿಲ್ಲ. ಸರ್ಕ್ಯೂಟ್‌ ಹೌಸ್‌ನಲ್ಲಿ ತಂಗಿದಾಗಲೂ ಅದರ ವೆಚ್ಚವನ್ನು ಕೊಡುತ್ತೇನೆ. ನನಗೆ ರಾಜಕೀಯ ಎಂದರೆ ಸಮಾಜಸೇವೆ. ನಾನು ನನ್ನ ಹೆತ್ತವರು ಮತ್ತು ಶಿಕ್ಷಕರಿಂದ ಕಲಿತಿದ್ದು ಇದೇ ಆದರ್ಶʼʼ ಎಂದು ಮಮತಾ ಬ್ಯಾನರ್ಜಿ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.

ನನ್ನ ಆದಾಯ ಮೂಲವನ್ನು ಇ.ಡಿ ಕೇಳಿದರೆ, ನಾನು ಹೇಳುವೆ- ” ನಾನು ಪುಸ್ತಕಗಳನ್ನು ಬರೆಯುತ್ತೇನೆ ಮತ್ತು ಅದಕ್ಕೆ ಗೌರವ ಧನ ಪಡೆಯುತ್ತೇನೆʼʼ ಎಂದು ಮಮತಾ ಬ್ಯಾನರ್ಜಿ ಹೇಳಿದರು.

Exit mobile version