Site icon Vistara News

ರಾಮಮಂದಿರ ಉದ್ಘಾಟನೆ ದಿನವೇ ಸರ್ವಧರ್ಮ ಸಮ್ಮೇಳನ ನಡೆಸಲಿರುವ ಮಮತಾ ಬ್ಯಾನರ್ಜಿ!

Mamata Banerjee

Who knows if this government will last even 15 days; Says Mamata Banerjee

ಕೋಲ್ಕೊತಾ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಹತ್ತಾರು ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದೆ. ಬುಧವಾರ (ಜನವರಿ 17) ರಾಮಲಲ್ಲಾ ಮಂದಿರವನ್ನು ಪ್ರವೇಶಿಸಲಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಅವರು (Narendra Modi) ಅವರು ಜನವರಿ 22ರಂದು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇದರ ಬೆನ್ನಲ್ಲೇ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳದಿರಲು ತೀರ್ಮಾನಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ (Mamata Banerjee) ಅವರು ಜನವರಿ 22ರಂದೇ ಕೋಲ್ಕೊತಾದಲ್ಲಿ ಸರ್ವಧರ್ಮ ಸಮ್ಮೇಳನ (Sarba Dharma Rally) ನಡೆಸಲು ಮುಂದಾಗಿದ್ದಾರೆ.

ಸರ್ವಧರ್ಮ ರ‍್ಯಾಲಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಮಾಹಿತಿ ನೀಡಿದರು. “ಜನವರಿ 22ರಂದು ಕಾಳಿಘಾಟ್‌ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಸರ್ವಧರ್ಮಗಳ ರ‍್ಯಾಲಿ ಆರಂಭಿಸುತ್ತೇನೆ. ಎಲ್ಲ ಧರ್ಮೀಯರು ಕೂಡ ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಕಾಳಿಘಾಟ್‌ ಹಜ್ರಾದಿಂದ ಆರಂಭವಾಗುವ ರ‍್ಯಾಲಿಯು ಪಾರ್ಕ್‌ ಸರ್ಕಸ್‌ವರೆಗೆ ರ‍್ಯಾಲಿ ನಡೆಯಲಿದೆ. ಎಲ್ಲ ಜಿಲ್ಲೆಗಳ ಮುಖ್ಯಸ್ಥರು ರ‍್ಯಾಲಿಗೆ ಸಿದ್ಧರಾಗಬೇಕು ಎಂಬುದಾಗಿ ಕೋರುತ್ತೇನೆ. ದೇವಾಲಯಗಳು, ಚರ್ಚ್‌, ಗುರುದ್ವಾರ ಹಾಗೂ ಮಸೀದಿಗಳಿಗೆ ಭೇಟಿ ನೀಡುವ ಮೂಲಕ ರ‍್ಯಾಲಿ ಸಾಗುತ್ತದೆ” ಎಂದು ತಿಳಿಸಿದರು.

ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹಿತ ಹಲವು ಉನ್ನತ ಮಟ್ಟದ ನಾಯಕರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಅಯೋಧ್ಯೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈಗಾಗಲೇ ನಗರದಲ್ಲಿ 10,000 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಮಾತ್ರವಲ್ಲ ಸಮಾರಂಭದ ದಿನ ಡ್ರೋನ್‌ ಮೂಲಕ ಕಣ್ಗಾವಲು ಇಡಲಾಗುತ್ತದೆ. ಜತೆಗೆ ಈ ಪ್ರದೇಶದಲ್ಲಿ ಯಾವುದೇ ಅನಧಿಕೃತ ಡ್ರೋನ್ ಹಾರಾಡುತ್ತಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಆ್ಯಂಟಿ ಡ್ರೋನ್‌ ಸಿಸ್ಟಮ್‌ (Anti-drone system) ಜಾರಿಗೊಳಿಸಲಾಗುವುದು ಎಂದು ಭದ್ರತಾ ಎಸ್‌ಪಿ ಗೌರವ್ ವನ್ಸ್‌ವಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ: Ram Mandir: ಉದ್ಘಾಟನೆಗೆ ಸಜ್ಜಾಗಿರುವ ರಾಮಮಂದಿರ ಹೇಗಿದೆ? ಇಲ್ಲಿವೆ ಹೊಸ ಫೋಟೊಗಳು

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಜರ್ಮನಿ, ಫಿಜಿ, ಫಿನ್‌ಲ್ಯಾಂಡ್‌, ಅಮೆರಿಕ, ಬ್ರಿಟನ್‌, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್‌, ಜಪಾನ್‌, ಕೀನ್ಯಾ, ಕೊರಿಯಾ, ಮಾರಿಷಸ್‌, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್‌, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್‌ ಇಂಡೀಸ್‌ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version