ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದು ನಿಂತಿದೆ. ಆರು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ಜೂನ್ 1ರಂದು ಏಳನೇ ಅಥವಾ ಕೊನೆಯ ಹಂತದ ಮತದಾನದ ಮೂಲಕ ಸಾರ್ವತ್ರಿಕ ಚುನಾವಣೆ ಮುಗಿಯಲಿದೆ. ಇನ್ನು, ಕೊನೆಯ ಹಂತದ ಮತದಾನದ ದಿನವಾದ ಜೂನ್ 1ರಂದೇ ಇಂಡಿಯಾ ಒಕ್ಕೂಟದ (INDIA Bloc) ಪಕ್ಷಗಳ ಸಭೆ ನಡೆಯಲಿದೆ. ಆದರೆ, ಇಂಡಿಯಾ ಒಕ್ಕೂಟದ ಮಹತ್ವದ ಸಭೆಗೆ ಗೈರಾಗಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ತಿಳಿಸಿದ್ದಾರೆ. ಇದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಇಂಡಿಯಾ ಒಕ್ಕೂಟದ ಪಕ್ಷಗಳ ಸಭೆಗೆ ಗೈರಾಗುವ ಕುರಿತು ಕೋಲ್ಕೊತಾದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ ಅವರೇ ಹೇಳಿದ್ದಾರೆ. “ಜೂನ್ 1ರಂದು ಇಂಡಿಯಾ ಒಕ್ಕೂಟದ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂಬುದಾಗಿ ಮೊದಲೇ ತಿಳಿದಿತ್ತು. ಆದರೆ, ಜೂನ್ 1ರಂದು ಬೇರೆ ರಾಜ್ಯಗಳಂತೆ ಪಶ್ಚಿಮ ಬಂಗಾಳದಲ್ಲೂ ಮತದಾನ ನಡೆಯುವ ಕಾರಣ ಬರಲು ಆಗುವುದಿಲ್ಲ ಎಂಬುದಾಗಿ ತಿಳಿಸಿದ್ದೇನೆ. ಈಗ ರೆಮಾಲ್ ಚಂಡಮಾರುತವು ಕೂಡ ರಾಜ್ಯವನ್ನು ಬಾಧಿಸುತ್ತಿದೆ. ಇಂಡಿಯಾ ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳುವ ಬದಲು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ರಾಜ್ಯದ ಜನರೇ ನನ್ನ ಮೊದಲ ಆದ್ಯತೆ” ಎಂಬುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
#Watch: #TMC supremo #MamataBanerjee to skip India bloc meeting scheduled to be held on June 1 due to elections, cyclone & relief works in the affected area.
— Pooja Mehta (@pooja_news) May 27, 2024
Says, “I may not be there to attend the meeting but my heart will be there.” pic.twitter.com/ni5ghwY8O9
ಇಂಡಿಯಾ ಒಕ್ಕೂಟದ ಸಭೆ ಏಕೆ?
ಜೂನ್ 1ರಂದು ಲೋಕಸಭೆ ಚುನಾವಣೆ ಸಮಾರೋಪಗೊಳ್ಳಲಿದೆ. ಕಾಂಗ್ರೆಸ್, ಸಿಪಿಎಂ ಸೇರಿ ಹಲವು ಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟವನ್ನು ರಚಿಸಲಾಗಿದೆ. ಜೂನ್ 4ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಇದಕ್ಕಾಗಿ ಜೂನ್ 1ರ ಸಭೆಯು ಮಹತ್ವ ಪಡೆದುಕೊಂಡಿದೆ. ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವು ಹೆಚ್ಚು ಸ್ಥಾನಗಳನ್ನು ಗೆದ್ದರೆ ಮುಂದೆ ಹೇಗೆ ತೀರ್ಮಾನ ತೆಗೆದುಕೊಳ್ಳಬೇಕು? ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೇಗೆ ಇರಬೇಕು? ಹಿನ್ನಡೆಯಾದರೆ ಏನು ಮಾಡಬೇಕು ಎಂಬುದು ಸೇರಿ ಹಲವು ವಿಷಯಗಳ ಕುರಿತು ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳ ನಾಯಕರು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಫಲೋಡಿ ಸಟ್ಟಾ ಬಜಾರ್ ಸಮೀಕ್ಷೆ ಪ್ರಕಟಿಸಿದೆ. ಬಿಜೆಪಿಯೊಂದೇ 304-306 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು 60-62 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂಬುದಾಗಿ ಸಮೀಕ್ಷಾ ವರದಿ ತಿಳಿಸಿದೆ. ಹಾಗಾಗಿ, ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವೇ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂಬುದು ವರದಿಯ ಸಾರಾಂಶವಾಗಿದೆ.
ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಉಳಿದುಕೊಂಡಿದ್ದ ಹೋಟೆಲ್ ಬಿಲ್ ಪಾವತಿಸಲು ರಾಜ್ಯ ಸರ್ಕಾರ ನಿರ್ಧಾರ; ಎಷ್ಟು ಖರ್ಚಾಗಿತ್ತು?