Site icon Vistara News

RSS and Mamata | ಆರ್‌ಎಸ್ಎಸ್ ಕೆಟ್ಟದ್ದಲ್ಲ… ಮಮತಾ ಹೇಳಿಕೆಯನ್ನು ಗೇಲಿ ಮಾಡಿದ ಓವೈಸಿ!

Mamata and Owaisi

ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಮಧ್ಯ ರಾಜಕೀಯ ವೈರತ್ವವಿದೆ. ಆದರೂ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಮಾತೃಸಂಸ್ಥೆ ಆಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್ಎಸ್)ವನ್ನು ಇತ್ತೀಚೆಗೆ ಹೊಗಳಿದ್ದು, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರನ್ನು ಕೆರಳಿಸಿದೆ. ಮಮತಾ ಅವರ ಹೇಳಿಕೆಯನ್ನು ಗೇಲಿ ಮಾಡಿರುವ, 2003ರಲ್ಲಿ ಮಮತಾ ಇದೇ ರೀತಿ ಹೇಳಿದ್ದ ಮಾತುಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಮಮತಾ ಬ್ಯಾನರ್ಜಿ ಅವರು ಆರ್‌ಎಸ್ಎಸ್ ಈ ಮೊದಲು ಕೆಟ್ಟದಾಗಿರಲಿಲ್ಲ ಎಂದು ಹೇಳಿದ್ದರು. ಅವರ ಈ ಮಾತುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಆಗಿದೆ. ಬಿಜೆಪಿಯನ್ನು ಬೆಂಬಲಿಸಲು ಇಷ್ಟಪಡದ ಜನರು ಆರ್‌ಎಸ್‌ಎಸ್‌ನಲ್ಲಿದ್ದಾರೆ ಎಂಬ ಮಾತುಗಳನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಆರ್‌ಎಸ್‌ಎಸ್‌ನಲ್ಲಿರುವವರು ಬಹಳಷ್ಟು ಜನರು ಬಿಜೆಪಿ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನುಹೊಂದಿಲ್ಲ. ಖಂಡಿತವಾಗಿಯೂ ಅವರು ಒಂದು ದಿನ ತಮ್ಮ ಮೌನವನ್ನು ಮುರಿಯುತ್ತಾರೆ ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮಮತಾ ಅವರ ಈ ವಿಡಿಯೋದೊಂದಿಗೆ ಟ್ವೀಟ್ ಮಾಡಿರುವ ಆಲ್ ಇಂಡಿಯಾ ಮಜ್ಲೀಸ್-ಇ-ಇತ್ತೆಹಾದುಲ್ ಮುಸ್ಲಿಮೀ(ಎಐಎಂಐಎಂ) ನಾಯಕ ಅಸಾದುದ್ದೀನ್ ಓವೈಸಿ ಅವರು, 2003ರಲ್ಲಿ ಮಮತಾ ಬ್ಯಾನರ್ಜಿ, ಆರ್‌ಎಸ್ಎಸ್ ಹೊಗಳಿದ್ದನ್ನು ಕೆದಕಿದ್ದಾರೆ.

2003ರಲ್ಲಿ ಆರ್‌ಎಸ್ಎ‌ಸ್ ಅನ್ನು ದೇಶಭಕ್ತ ಸಂಘಟನೆ ಎಂದು ಮಮತಾ ಬ್ಯಾನರ್ಜಿ ಅವರು ಕರೆದಿದ್ದರು. ಇದಕ್ಕೆ ಪ್ರತಿಯಾಗಿ ಆರ್‌ಎಸ್ಎಸ್ ಮಮತಾ ಅವರನ್ನು ದುರ್ಗೆ ಎಂದು ಬಣ್ಣಿಸಿತ್ತು. ಆರ್‌ಎಸ್ಎಸ್‌ಗೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಉದ್ದೇಶವಿದೆ. ಆರ್‌ಎಸ್‌ಎಸ್‌ಗೆ ಮುಸ್ಲಿಂ-ವಿರೋಧಿ ದ್ವೇಷದ ಅಪರಾಧಗಳ ಸಂಪೂರ್ಣ ಇತಿಹಾಸವಿದೆ. ಗುಜರಾತ್ ಹತ್ಯಾಕಾಂಡದ ನಂತರ ಬಿಜೆಪಿಯನ್ನು ಅವರು ಸಂಸತ್ತಿನಲ್ಲಿ ಸಮರ್ಥಿಸಿಕೊಂಡಿದ್ದರು. ಆದರೂ, ಟಿಎಂಸಿಯಲ್ಲಿರುವ ಮುಸ್ಲಿಮ್ ನಾಯಕರು, ಮಮತಾಳನ್ನು ಪ್ರಾಮಾಣಿಕತೆ ಮತ್ತು ಸ್ಥಿರತೆಹಾಗಿ ಹೊಗಳುವುದನ್ನು ಬಿಟ್ಟಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ | Bengal Coal Scam Case | ಮಮತಾ ನಾಡಿಗೆ ತನಿಖಾ ದಳಗಳ ಲಗ್ಗೆ; 8 ಐಪಿಎಸ್​ ಅಧಿಕಾರಿಗಳಿಗೆ ಇಡಿ ಸಮನ್ಸ್​​

Exit mobile version