ನವದೆಹಲಿ: ಇದು ಅಸಾಧ್ಯವನ್ನು ಸಾಧ್ಯವಾಗಿಸಿದವನ ಕತೆ. ತಾನು ಮಾಡದ ಕೊಲೆಗಳ (Meerut Murder Case) ಆರೋಪಕ್ಕಾಗಿ 12 ವರ್ಷಗಳ ಕಾಲ ಜೈಲಿನಲ್ಲಿದ್ದ ಯುವಕ, ಸೆರೆಮನೆಯಲ್ಲೇ ಕಾನೂನು ಓದಿ, ತನ್ನ ಕೇಸ್ ಅನ್ನು ತಾನೇ ವಾದ ಮಾಡಿ (fight his own Case) ಕೊನೆಗೂ ಕೋರ್ಟ್‍ನಿಂದ ಆರೋಪ ಮುಕ್ತನಾಗಿ ಹೊರ ಬಂದಿದ್ದಾರೆ(Court acquitted). ಹೌದು, ಮೀರತ್‌ನ ಅಮಿತ್ ಚೌಧರಿ (Amit Chaudhary) ಇಂಥ ವಿಸ್ಮಯಕಾರಿ ಸಾಹಸವನ್ನು ಮಾಡಿರುವ ಸಾಹಸಿ.
2011ರಲ್ಲಿ ಮೀರತ್‌ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಕೊಲೆಯಾಗಿತ್ತು. ಈ ಕೊಲೆ ಪ್ರಕರಣ ಸಂಬಂಧ ಇವರನ್ನು ಬಂಧಿಸಲಾಗಿತ್ತು. ಕ್ರಮೇಣ ಈ ಕೊಲೆಗೆ ಸಂಚು ರೂಪಿಸಿದ್ದ ಕಾಳಿ ಗ್ಯಾಂಗ್‌ನ ಸದಸ್ಯ ಎಂದು ಆರೋಪಿಸಲಾಯಿತು. ಕೊಲೆ ನಡೆದ ಸಮಯದಲ್ಲಿ ಚೌಧರಿ ತಮ್ಮ ಸಹೋದರಿ ಮನೆ ಇರುವ ಶಾಮ್ಲಿಯಲ್ಲಿದ್ದರು. ಆದರೂ, ಈ ಪ್ರಕರಣದಲ್ಲಿ 17 ಆರೋಪಿಗಳ ಪೈಕಿ ಚೌಧರಿ ಒಬ್ಬರಾದರು. ಅಂತಿಮವಾಗಿ ಭಾರತೀಯ ದಂಡ ಸಂಹಿತೆ ಮತ್ತು ರಾಷ್ಟ್ರೀಯ ಭದ್ರತಾ ಏಜೆನ್ಸಿಯ ಅಡಿಯಲ್ಲಿ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಯಿತು.
ಕೊಲೆಯಂಥ ಗಂಭೀರ ಆರೋಪಗಳನ್ನು ಎದುರಿಸಿದ ನಂತರ, ಕಿರ್ತಾಲ್ ಗ್ರಾಮದ ರೈತ ಕುಟುಂಬದಿಂದ ಬಂದ ಚೌಧರಿ, ಹಠಾತ್ತನೆ ಪಾತಾಳ ಕಂಡ ತನ್ನ ಮತ್ತು ತಮ್ಮ ಕುಟುಂಬವನ್ನು ಮತ್ತೆ ಹೋರಾಡಲು ಮತ್ತು ಅವರ ಜೀವನದ ದಿಕ್ಕನ್ನು ಬದಲಾಯಿಸಲು ಯೋಚಿಸಿದರು. ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಪಡಲು ಆರಂಭಿಸಿದರು.
ಅಮಿತ್ ಚೌಧರಿ ಜೈಲಿನಲ್ಲಿದ್ದಾಗಲೂ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಚೌಧರಿ ಇದ್ದ ಮುಜಾಫ್ಫರ್‌ನಗರ ಜೈಲಿನಲ್ಲಿ ಗ್ಯಾಂಗಸ್ಟರ್‌ಗಳಾದ ಅನಿಲ್ ದುಜನಾ, ವಿಕ್ಕಿ ತ್ಯಾಗಿಯಂಥವರಿದ್ದರು. ಅವರು ಚೌಧರಿಯನ್ನು ತಮ್ಮ ಗ್ಯಾಂಗಿಗೆ ಸೇರಿಸಿಕೊಳ್ಳಲು ಮುಂದಾದರು. ಆದರೆ, ಅಲ್ಲಿನ ಜೈಲರ್ ಗೂಂಡಾಗಳಿಂದ ಚೌಧರಿಯನ್ನು ದೂರ ಇಡುವುದಕ್ಕಾ ಬೇರೆ ಬ್ಯಾರಾಕ್‌ಗೆ ವರ್ಗಾಯಿಸಿದರು.
2013ರಲ್ಲಿ ಜಾಮೀನು ಮೇಲೆ ಬಿಡುಗಡೆಯಾದ ಬಳಿಕ ಚೌಧರಿ ಕಾನೂನು ಪದವಿ ಕಲಿಯಲು ಮುಂದಾದರು. ಬಿಎ ಪೂರ್ಣಗೊಳಿಸಿ, ಎಲ್ಎಲ್‌ಬಿ, ಎಲ್‌ಎಲ್‌ಎಂ ಪಾಸು ಮಾಡಿದರು. ಅಷ್ಟೇ ಅಲ್ಲದೇ, ಬಾರ್ ಕೌನ್ಸಿಲ್ ಪರೀಕ್ಷೆಯನ್ನೂ ಪಾಸು ಮಾಡಿದರು. ಪೊಲೀಸ್ ಅಧಿಕಾರಿಗಳ ಕೊಲೆ ಪ್ರಕರಣದಲ್ಲಿ ತಾನು ನಿರಪರಾಧಿ ಎಂದು ಸಾಬೀತುಪಡಿಸಿ, ತಮ್ಮ ಕುಟುಂಬವು ಸಮಾಜದಲ್ಲಿ ತಲೆ ಎತ್ತಿ ನಡೆಯುವುದನ್ನು ನೋಡುವುದೇ ಗುರಿಯಾಗಿತ್ತು.
ಲಾಯರ್ ಆದ ಮೇಲೆ ತಮ್ಮ ಕೇಸನ್ನು ತಾವೇ ನಡೆಸಲು ಆರಂಭಿಸಿದರು ಚೌಧರಿ. ಆದರೆ, ಪ್ರಕರಣದ ವಿಚಾರಣೆ ತುಂಬ ನಿಧಾನವಾಗಿ ನಡೆಯುತ್ತಿತ್ತು. ಯಾರ ಹೇಳಿಕೆಯನ್ನು ದಾಖಲಿಸಲಿಲ್ಲ. ಈ ಪ್ರಕರಣದಲ್ಲಿ ಚೌಧರಿ ನಿರಪರಾಧಿ ಎಂಬುದಕ್ಕೆ ಸಾಕ್ಷ್ಯ ಕೊಡ ದೊರೆಯಿತು. ಈ ಪ್ರಕರಣದಲ್ಲಿ ಹೇಳಿಕೆ ದಾಖಲಿಸಲು ಆಗಮಿಸಿದ ಸಾಕ್ಷಿಯೊಬ್ಬರು, ಕೋರ್ಟ್‌ನಲ್ಲಿ ವಕೀಲ ಹಾಗೂ ಆರೋಪಿಯಾಗಿರುವ ಅಮಿತ್ ಚೌಧರಿ ಪಕ್ಕದಲ್ಲೇ ನಿಂತರೂ ಗುರುತಿಸಲಿಲ್ಲ. ಈ ಬೆಳವಣಿಗೆಯು ನ್ಯಾಯಾಧೀಶರಿಗೆ ತನ್ನನ್ನು ತಪ್ಪಾಗಿ ಈ ಕೇಸಿನಲ್ಲಿ ಸಿಕ್ಕಿಸಲಾಗಿದೆ ಎಂದು ಮನವರಿಕೆಯಾಯಿತು ಎನ್ನುತ್ತಾರೆ ಚೌಧರಿ ಅವರು.
ಅಂತಿಮವಾಗಿ ಪುರಾವೆಗಳು ಇಲ್ಲದ್ದರಿಂದ ಇಬ್ಬರು ಪೊಲೀಸ್ ಅಧಿಕಾರಿಗಳ ಕೊಲೆ ಪ್ರಕರಣದಲ್ಲಿ ಅಮಿತ್ ಚೌಧರಿ ಸೇರಿದಂತೆ 13 ಜನರನ್ನು ಇತ್ತೀಚೆಗಷ್ಟೇ ಖುಲಾಸೆಗೊಳಿಸಿತು. ಯಾವುದೇ ತಪ್ಪು ಮಾಡದೇ 12 ವರ್ಷ ಜೈಲಿನಲ್ಲಿ ಕಳೆದ ಚೌಧರಿಗೆ ಸೇನೆ ಸೇರಬೇಕು ಎಂಬ ಆಸೆ ಇತ್ತು. ಆದರೆ, ಈಗ ಎಲ್ಲ ಆದ್ಯತೆಗಳು ಬದಲಾಗಿವೆ. ಅಪರಾಧ ನ್ಯಾಯದಲ್ಲಿ ಪಿಎಚ್‌ಡಿ ಮಾಡುವ ಆಸೆಯನ್ನು ಅಮಿತ್ ಚೌಧರಿ ಹೊಂದಿದ್ದಾರೆ.
ಈ ಸುದ್ದಿಯನ್ನೂ ಓದಿ: ನಿಠಾರಿ ಸರಣಿ ಕೊಲೆ ಪ್ರಕರಣ: ಕೋಲಿ, ಪಂಧೇರ್ ಎದುರಿಸುತ್ತಿದ್ದ ಆರೋಪ ಏನು? ಅವರಿಗೇಕೆ ಗಲ್ಲು ಶಿಕ್ಷೆಯಾಗಿತ್ತು?