ಮುಂಬೈ: ವಿಮಾನದಲ್ಲಿ ದುಬಾರಿ ಎನಿಸಿದರೂ ತುಂಬ ಜನ ಊಟ ಮಾಡುತ್ತಾರೆ. ದೂರದ ದೇಶಗಳಿಗೆ ತೆರಳುವವರಿಗಂತೂ ವಿಮಾನದಲ್ಲಿಯೇ ಊಟ ಮಾಡುವುದು ಅನಿವಾರ್ಯ. ಹಾಗೆಯೇ, ಬಹುತೇಕ ವಿಮಾನಯಾನ ಸಂಸ್ಥೆಗಳು ಗುಣಮಟ್ಟ ಹಾಗೂ ರುಚಿಯನ್ನು ಕಾಪಾಡುತ್ತವೆ. ಆದರೆ, ಇತ್ತೀಚೆಗೆ ವಿಸ್ತಾರ ವಿಮಾನಯಾನ ಸಂಸ್ಥೆ (Vistara Airlines)ಯ ವಿಮಾನದಲ್ಲಿ ವ್ಯಕ್ತಿಯೊಬ್ಬರಿಗೆ ನೀಡಿದ ಊಟದಲ್ಲಿ ಜಿರಳೆ (Cockroach In Meal) ಪತ್ತೆಯಾಗಿದ್ದು, ವ್ಯಕ್ತಿಯು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಶೇರ್ ಮಾಡಿದ್ದಾರೆ.
ನಿಕುಲ್ ಸೋಲಂಕಿ (Nikul Solanki) ಎಂಬುವರು ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಎರಡು ಫೋಟೊ ಶೇರ್ ಮಾಡಿರುವ ಅವರು, “ವಿಮಾನದಲ್ಲಿ ಕೊಟ್ಟ ಊಟದಲ್ಲಿ ಸಣ್ಣದೊಂದು ಜಿರಳೆ ಪತ್ತೆಯಾಗಿದೆ” ಎಂದು ಹೇಳಿದ್ದಾರೆ. ಅವರು ಆಗಸ್ಟ್ 31ರಂದು ಮುಂಬೈನಿಂದ ಬ್ಯಾಂಕಾಕ್‌ಗೆ ತೆರಳುವಾಗ ಇಂತಹದ್ದೊಂದು ಮುಜುಗರದ ಸಂಗತಿ ನಡೆದಿದೆ ಎಂದು ತಿಳಿದುಬಂದಿದೆ. ಇದಕ್ಕೆ ಜಾಲತಾಣದಲ್ಲಿ ಒಂದಷ್ಟು ಜನ ತಮಾಷೆ ಮಾಡಿದರೆ, ಮತ್ತೊಂದಿಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರಿಂದ ತರಾಟೆ
“ಏರ್‌ಲೈನ್ಸ್‌ನವರು ತೆಗೆದುಕೊಳ್ಳುವ ಹಣಕ್ಕೆ ಇನ್ನೂ ದೊಡ್ಡ ಕಾಕ್ರೋಚ್ ಪತ್ತೆಯಾಗಬೇಕಿತ್ತು. ತಮಾಷೆ ಬದಿಗಿಟ್ಟು ಹೇಳುವುದಾದರೆ, ನಿಮ್ಮ ಪರಿಸ್ಥಿತಿ ಬಗ್ಗೆ ಮರುಕವಿದೆ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ವಿಮಾನದಲ್ಲಿ ನೀಡುವ ಆಹಾರ ಕಳಪೆಯಾಗಿರುತ್ತದೆ. ಅವರು ಶುಚಿತ್ವ ಕಾಪಾಡುವುದಿಲ್ಲ. ಜಿರಳೆ ಪತ್ತೆಯಾಗಿದ್ದೇ ನಿಜವಾದರೆ ವಿಸ್ತಾರ ಏರ್‌ಲೈನ್ಸ್ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದ್ದಾರೆ. ಹೀಗೆ ಹತ್ತಾರು ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏರ್‌ಲೈನ್ಸ್ ಹೇಳುವುದೇನು?
ಜಿರಳೆ ಪತ್ತೆಯಾಗಿರುವ ಕುರಿತು ಸೋಲಂಕಿ ಹಾಕಿದ ಪೋಸ್ಟ್‌ಗೆ ಹತ್ತಾರು ಜನ ಪ್ರತಿಕ್ರಿಯಿಸಿದ ಬೆನ್ನಲ್ಲೇ ಏರ್‌ಲೈನ್ಸ್ ಸ್ಪಷ್ಟನೆ ನೀಡಿದೆ. “ವ್ಯಕ್ತಿಯೊಬ್ಬರು ನೀಡಿದ ದೂರಿನ ಅನ್ವಯ ಈ ಕುರಿತು ತನಿಖೆ ನಡೆಸಲಾಗಿದೆ. ತನಿಖೆಯ ವರದಿ ಪ್ರಕಾರ, ಊಟದಲ್ಲಿ ಸಿಕ್ಕಿರುವುದು ಶುಂಠಿಯೇ ಹೊರತು, ಜಿರಳೆ ಅಲ್ಲ” ಎಂದು ತಿಳಿಸಿದೆ.
ಇದನ್ನೂ ಓದಿ | Motivational story | ರೆಸ್ಟೋರೆಂಟಿನಲ್ಲಿ ಬಿದ್ದ ಜಿರಳೆ ಮತ್ತು ಮೂವರು ಮಹಿಳೆಯರ ಪ್ರತಿಕ್ರಿಯೆ