Site icon Vistara News

Aadhaar Card: ಪಿಎಂ ಮೋದಿ, ಸಿಎಂ ಯೋಗಿ ಆಧಾರ್ ಕಾರ್ಡ್ ತಿದ್ದಿದ ಬಿಹಾರದ ಖತರ್ನಾಕ್ ವ್ಯಕ್ತಿ ಅರೆಸ್ಟ್!

election results 2024 Modi and Yogi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Uttar Pradesh Chief Minister Yogi Adityanath) ಅವರ ಆಧಾರ್ ಕಾರ್ಡ್ (Aadhaar Card) ತಿದ್ದಿದ ಬಿಹಾರದ ಮುಜಾಫರ್‌ಪುರ್ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಗುಜರಾತ್ (Gujarat Police) ಹಾಗೂ ಬಿಹಾರ (Bihar Police) ಪೊಲೀಸರು ಜಂಟಿಯಾಗಿ ಗುರುವಾರ ಬಂಧಿಸಿದ್ದಾರೆ. ಪ್ರಧಾನಿ ಹಾಗೂ ಮುಖ್ಯಮಂತ್ರಿಯ ಆಧಾರ್ ಕಾರ್ಡನ್ನೇ ತಿದ್ದುವಾಗ ಸಾಮಾನ್ಯರ ಆಧಾರ್ ಕಾರ್ಡ್ ಮಾಹಿತಿಯ ಗತಿ ಏನು ಎಂಬ ಅಸಮಾಧಾನ ಸಾರ್ವಜನಿಕರು ಹೊರ ಹಾಕಿದ್ದರು. ಅಂತಿಮವಾಗಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರ ಆಧಾರ್ ಕಾರ್ಡ್ ತಿದ್ದಿದ ಅರ್ಪಣಾ ದುಬೆ ಅಲಿಯಾಸ್ ಮದನ್ ಕುಮಾರ್ ಎಂಬ ವ್ಯಕ್ತಿಯನ್ನು ಮುಜಾಫರ್‌ಪುರ್ ಜಿಲ್ಲೆಯ ಸಾದತ್‌ಪುರ್ ಪ್ರದೇಶದಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ಮುಜಾಫರ್‌ಪುರ್ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿ ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಆರೋಪಿಯು ಮುಜಾಫರ್ ಪುರ್ ಜಿಲ್ಲೆಯ ಗರಿಬಾ ಗಾಂವ್ ಎಂಬ ಹಳ್ಳಿಯವನಾಗಿದ್ದಾನೆ. ಕಂಠಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಸಾದತ್‌ಪುರ ಪ್ರದೇಶದ ಕಾಲೇಜೊಂದರಲ್ಲಿ ಪದವಿ ಓದುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಜರಾತ್‌ದಿಂದ ಆಗಮಿಸಿದ ಪೊಲೀಸ್ ತಂಡಕ್ಕೆ ಸ್ಥಳೀಯ ಪೊಲೀಸರು ನೆರವು ನೀಡಿದ್ದರು. ವೆಬ್‌ಸೈಟ್‌ನಲ್ಲಿ ಆಧಾರ್ ಕಾರ್ಡ್ ತಿದ್ದುವ ಪ್ರಯತ್ನಗಳು ನಡೆದಿರುವ ಬಗ್ಗೆ ಮಾಹಿತಿ ದೊರೆತಿತ್ತು. ಈ ಕುರಿತು ಐಪಿ ಅಡ್ರೆಸ್ ಪರಿಶೀಲಿಸಿದಾಗ ಆರೋಪಿಯ ಸಿಕ್ಕಿಬಿದ್ದಿದ್ದಾನೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Aadhar Card | ಮೈನರ್ ಹುಡ್ಗಿ-ಮೇಜರ್ ಹುಡುಗ; ಮದುವೆಗಾಗಿ ಹುಡುಗಿ ಆಧಾರ್ ಕಾರ್ಡ್‌ನಲ್ಲೇ ತಿದ್ದುಪಡಿ!

ಆರೋಪಿಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರ ಆಧಾರ್ ಕಾರ್ಡ್‌ನಲ್ಲಿ ಅವರ ಬರ್ತ್ ಡೇಟ್ ಬದಲಿಸಿದ್ದಾನೆ. ಅಲ್ಲದೇ ಇತರ ವಿಷಯಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಗುಜರಾತ್ ಪೊಲೀಸ್ ತಂಡವು ಆರೋಪಿಯನ್ನು ಕರೆದೊಯ್ದಿದೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version