ಭೋಪಾಲ್: ದೇಶದ ಯಾವುದೇ ನಗರದಲ್ಲಿ ಪಾವತಿಸಿ ಬಳಸುವ (Pay And Use) ಶೌಚಾಲಯಕ್ಕೆ ತೆರಳಿ ಮೂತ್ರ ವಿಸರ್ಜನೆ ಮಾಡಿದರೆ 5 ರೂ. ಖರ್ಚಾಗುತ್ತದೆ. ಇನ್ನೂ ಹೆಚ್ಚೆಂದರೆ 10 ರೂ. ಖರ್ಚಾಗಬಹುದು. ಆದರೆ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮೂಲದ ವ್ಯಕ್ತಿಯು ವಂದೇ ಭಾರತ್ (Vande Bharat) ಎಕ್ಸ್‌ಪ್ರೆಸ್ ರೈಲಿನಲ್ಲಿ ಮೂತ್ರ ವಿಸರ್ಜನೆ ಮಾಡಲು ಹೋಗಿ 6 ಸಾವಿರ ರೂ. (Viral News) ಕಳೆದುಕೊಂಡಿದ್ದಾರೆ.
ಹೌದು, ಅಬ್ದುಲ್ ಖಾದಿರ್ ಎಂಬುವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೂತ್ರ ವಿಸರ್ಜನೆ ಮಾಡಿ 6 ಸಾವಿರ ರೂ. ತೆತ್ತಿದ್ದಾರೆ. ಅಬ್ದುಲ್ ಖಾದಿರ್, ಅವರ ಪತ್ನಿ ಹಾಗೂ 8 ಎಂಟು ವರ್ಷದ ಮಗ ಸೇರಿ ಭೋಪಾಲ್‌ನಿಂದ ಸಿಂಗ್ರೌಲಿಗೆ ರೈಲು ಹತ್ತಬೇಕಿತ್ತು. ಮೂವರೂ ಜುಲೈ 15ರ ಸಂಜೆ 5.20ರ ಸುಮಾರಿಗೆ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ಸಿಂಗ್ರೌಲಿ ರೈಲು 8.55ಕ್ಕೆ ಹೊರಡಬೇಕಿತ್ತು. ಇದೇ ವೇಳೆ ಅಬ್ದುಲ್ ಖಾದಿರ್ ಅವರು ತುರ್ತಾಗಿ ಮೂತ್ರ ವಿಸರ್ಜನೆ ಮಾಡಬೇಕಾಗಿದೆ. ಆಗ, ಹತ್ತಿರದಲ್ಲಿ ಶೌಚಾಲಯ ಕಾಣದ ಕಾರಣ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ವಂದೇ ಭಾರತ್ ರೈಲು ಹತ್ತಿ, ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಲು ತೆರಳಿದ್ದಾರೆ. ಆಗಲೇ ಅವರ ಬ್ಯಾಡ್ ಟೈಮ್ ಶುರುವಾಗಿದೆ.
ಮೂತ್ರ ವಿಸರ್ಜನೆ ಮಾಡಿ, ನಿಟ್ಟುಸಿರು ಬಿಟ್ಟು ರೈಲಿನ ಶೌಚಾಲಯದಿಂದ ಹೊರಬಂದರೆ ಅಬ್ದುಲ್ ಖಾದಿರ್ ಅವರಿಗೆ ಶಾಕ್ ಕಾದಿತ್ತು. ರೈಲು ಆಗಲೇ ಹೊರಟಾಗಿದೆ. ರೈಲಿನ ಬಾಗಿಲು ಕೂಡ ತೆರೆಯಲು ಆಗಿಲ್ಲ. ಚಾಲಕನೇ ರೈಲಿನ ಬಾಗಿಲು ತೆರೆಯುವಷ್ಟರಲ್ಲಿ ತುಂಬ ಸಮಯ ಆಗಿದೆ. ಕೊನೆಗೆ ರೈಲಿನ ಚಾಲಕನನ್ನು ಸಂಪರ್ಕಿಸಿ, ರೈಲು ನಿಲ್ಲಿಸುವ ಹೊತ್ತಿಗೆ ಉಜ್ಜಯಿನಿ ರೈಲು ನಿಲ್ದಾಣ ಆಗಮಿಸಿದೆ. ಟಿಕೆಟ್ ಇಲ್ಲದ ಪ್ರಯಾಣ ಮಾಡಿದ ಕಾರಣ ವ್ಯಕ್ತಿಗೆ 1,020 ರೂ. ದಂಡ ವಿಧಿಸಲಾಗಿದೆ. ಉಜ್ಜಯಿನಿಂದ ಭೋಪಾಲ್‌ಗೆ ತೆರಳಲು 750 ರೂ. ಬಸ್ ಚಾರ್ಜ್ ಆಗಿದೆ.
ಇದನ್ನೂ ಓದಿ: Vande Bharat Express: ಮಧ್ಯಪ್ರದೇಶದಲ್ಲಿ ವಂದೇ ಭಾರತ್ ರೈಲು ಬೋಗಿಗೆ ಬೆಂಕಿ; ಚಲಿಸುವಾಗಲೇ ದುರಂತ
ಅಷ್ಟೇ ಅಲ್ಲ, ಭೋಪಾಲ್‌ನಿಂದ ಸಿಂಗ್ರೌಲಿಗೆ ತೆರಳಲು ದಕ್ಷಿಣ ಎಕ್ಸ್‌ಪ್ರೆಸ್ ರೈಲಿನಲ್ಲಿ ಬುಕ್ ಆಗಿದ್ದ 4 ಸಾವಿರ ರೂ. ಮೌಲ್ಯದ ಟಿಕೆಟ್‌ಗಳನ್ನು ಬಳಸಲು ಆಗಿಲ್ಲ. ಅಷ್ಟೊತ್ತಿಗಾಗಲೇ ದಕ್ಷಿಣ ಎಕ್ಸ್‌ಪ್ರೆಸ್ ರೈಲು ಹೊರಟ ಕಾರಣ ವ್ಯಕ್ತಿಗೆ ಸುಮಾರು 6 ಸಾವಿರ ರೂ. ಖರ್ಚಾಗಿದೆ. ಇನ್ನು ಮೂತ್ರ ವಿಸರ್ಜನೆಗೆ ಹೋದಾತ ಬಂದಿಲ್ಲ ಎಂದು ಆತನ ಪತ್ನಿ ಮತ್ತು ಮಗ ಭೋಪಾಲ್ ರೈಲು ನಿಲ್ದಾಣದಲ್ಲಿ ಆತಂಕದಲ್ಲೇ ಕಾಲ ಕಳೆದಿದ್ದಾರೆ. ಅಬ್ದುಲ್ ಖಾದಿರ್ ವಾಪಸ್ ಬಂದ ನಂತರವೇ ಅವರು ನಿಟ್ಟುಸಿರುವ ಬಿಟ್ಟಿದ್ದಾರೆ. ಭೋಪಾಲ್‌ನಿಂದ ಬೇರೆ ರೈಲು ಹತ್ತಿ ಸಿಂಗ್ರೌಲಿ ತಲುಪಿದ್ದಾರೆ ಎಂದು ತಿಳಿದುಬಂದಿದೆ.