Site icon Vistara News

ಹಣವಿಲ್ಲದೆ ಪತ್ನಿಯ ಶವವನ್ನು ಹೊತ್ತು 33 ಕಿಮೀ ದೂರ ಸಾಗಿದ ಪತಿ; ಜನ ನೋಡಿಯೂ ಸುಮ್ಮನೆ ಹೋದರು

Andhra Pradesh 1

#image_title

ಆಂಧ್ರಪ್ರದೇಶದಲ್ಲಿ ಕೂಲಿಕಾರ್ಮಿಕನೊಬ್ಬ​​ ತನ್ನ ಪತ್ನಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು 33 ಕಿಲೋಮೀಟರ್​ ದೂರ ಸಾಗಿದ್ದಾನೆ. ಹೆಣ ಸಾಗಿಸಲು ವಾಹನ ವ್ಯವಸ್ಥೆ ಮಾಡಲು ಹಣವಿಲ್ಲದೆ, ಪತ್ನಿ ಶವವನ್ನು ಹೊತ್ತು 33 ಕಿಲೋಮೀಟರ್​ ದೂರ, ಅದೆಷ್ಟೋ ಲಕ್ಷ ಹೆಜ್ಜೆಗಳನ್ನು ನಡೆದಿದ್ದಾನೆ. ಈ ಫೋಟೋಗಳು ವೈರಲ್ ಆಗಿದ್ದು, ಕರಳು ಹಿಂಡುವಂತಿವೆ.

ಆ ವ್ಯಕ್ತಿಯ ಹೆಸರು ಗುರು. ಅವರ ಪತ್ನಿ ಪೊಟ್ಟಂಗಿ ಇಬ್ಬರೂ ಮೂಲತಃ ಒಡಿಶಾದ ಕೋರಟ್​ಪುರ ಜಿಲ್ಲೆಯವರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಕೂಲಿ ಕಾರ್ಮಿಕರಾಗಿದ್ದರು. ಸ್ವಲ್ಪ ದಿನಗಳ ಹಿಂದೆ ಪೊಟ್ಟಂಗಿ ಅನಾರೋಗ್ಯದಿಂದ ಇಲ್ಲಿನ ಸಾಗರ್ಬಲ್ಸಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದಾರೆ. ಆಕೆಯ ಶವವನ್ನು ಒಡಿಶಾದ ಕೋರಟ್​ಪುರ ಜಿಲ್ಲೆಯಲ್ಲಿರುವ ತನ್ನ ಹಳ್ಳಿಗೆ ತೆಗೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಲು ಗುರು ಬಳಿ ಹಣವಿರಲಿಲ್ಲ. ಗುರು ಮೊದಲೇ ಬಡವ, ಇದ್ದ ಹಣವೆಲ್ಲ ಪತ್ನಿಯ ಚಿಕಿತ್ಸೆಗೆ ಖಾಲಿಯಾಗಿತ್ತು. ಹೀಗಾಗಿ ಆತ ಆಸ್ಪತ್ರೆ ಆಡಳಿತಕ್ಕೆ ಮನವಿ ಮಾಡಿ, ಒಂದು ಆ್ಯಂಬುಲೆನ್ಸ್​ ಒದಗಿಸಿಕೊಡುವುಂತೆ ಕೇಳಿದ. ಆದರೆ ಆಸ್ಪತ್ರೆ ಒಪ್ಪಲಿಲ್ಲ, ಆ್ಯಂಬುಲೆನ್ಸ್​ ಕೊಡಲಿಲ್ಲ. ಹಣವೇ ಇಲ್ಲದ ಬಡವ ಗುರು ಬೇರೆ ದಾರಿ ಕಾಣದೆ, ಸಾಗರ್ಬಲ್ಸಾದಲ್ಲಿರುವ ಆಸ್ಪತ್ರೆಯಿಂದ ಪತ್ನಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಕೋರಾಪುಟ್​​ನಲ್ಲಿರುವ ತನ್ನ ಹಳ್ಳಿಯತ್ತ ಸಾಗಿದ್ದಾನೆ.

ಇದನ್ನೂ ಓದಿ: Viral Video| ಆಂಧ್ರಪ್ರದೇಶದಲ್ಲಿ ಆಡಳಿತ ಪಕ್ಷ-ವಿಪಕ್ಷ ಕಾರ್ಯಕರ್ತರ ನಡುವೆ ಮಾರಾಮಾರಿ; ಟಿಡಿಪಿ ಕಚೇರಿಗೆ ಬೆಂಕಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 33 ಕಿಲೋಮೀಟರ್​ಗಳಷ್ಟು ದೂರ ಅವನು ಹೀಗೇ ಸಾಗಿದ್ದಾನೆ. ಅನೇಕರು ಅವನನ್ನು ಗಮನಿಸಿದ್ದಾರೆ. ಆದರೆ ಯಾರೊಬ್ಬರೂ ಗುರುವಿನ ಬಳಿ ಬಂದು ಏನಾಯಿತು? ಸಹಾಯ ಬೇಕಾ? ಎಂದು ಒಂದು ಮಾತನ್ನೂ ಕೇಳಲಿಲ್ಲ. ನಂತರ ಆಂಧ್ರದ ವಿಜಯನಗರ ಎಂಬಲ್ಲಿ ಆತ ಬಂದ ನಂತರ ಸ್ಥಳೀಯರು ಸ್ವಲ್ಪ ಜನ ಗುರುವನ್ನ ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ವಿಜಯನಗರ ಗ್ರಾಮಾಂತರ ಠಾಣೆ ಎಎಸ್​ಐ ಕಿರಣ್​ ಕುಮಾರ್​ ಅವರು ಗುರುವಿಗೆ ಸಹಾಯ ಮಾಡಿದ್ದಾರೆ. ಆ್ಯಂಬುಲೆನ್ಸ್​​ವೊಂದನ್ನು ಕರೆಸಿ, ತಾವೇ ಹಣವನ್ನೂ ಕೊಟ್ಟು, ಶವವನ್ನು ಸಾಗಿಸಲು ವ್ಯವಸ್ಥೆ ಮಾಡಿದ್ದಾರೆ. ಎಎಸ್​ಐ ಕಿರಣ್​ ಕುಮಾರ್​ ಅವರನ್ನು ಎಲ್ಲರೂ ಹೊಗಳುತ್ತಿದ್ದಾರೆ. ಆದರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಆಸ್ಪತ್ರೆಯ ಬೇಜವಾಬ್ದಾರಿಯನ್ನು ಟೀಕಿಸಲಾಗುತ್ತಿದೆ. ಆತ ಅಷ್ಟು ದೂರ ನಡೆದರೂ, ಒಬ್ಬನೇ ಒಬ್ಬ ಸಹಾಯಕ್ಕೆ ಬರಲಿಲ್ಲ ಎಂದರೆ ಮಾನವೀಯತೆಯ ಅಧಃಪತನವೇ ಅಲ್ಲವೇ? ಎಂದು ಹೇಳುತ್ತಿದ್ದಾರೆ.

Exit mobile version