ಹೈದರಾಬಾದ್: ಜೇಮ್ಸ್ ಕ್ಯಾಮರಾನ್ ನಿರ್ದೇಶನದ ಅವತಾರ್: ದಿ ವೇ ಆಫ್ ವಾಟರ್ (Avatar 2) ಸಿನಿಮಾ ವೀಕ್ಷಿಸುವಾಗಲೇ ವ್ಯಕ್ತಿಯೊಬ್ಬನಿಗೆ ಹೃದಯಾಘಾತವುಂಟಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮೃತಪಟ್ಟಿದ್ದಾನೆ. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಪುರಂನಲ್ಲಿರುವ ಟಾಕೀಸ್‌ನಲ್ಲಿ ವ್ಯಕ್ತಿಯು ಸಿನಿಮಾ ವೀಕ್ಷಿಸುತ್ತಿದ್ದ. ಇದೇ ವೇಳೆ ತೀವ್ರ ಪ್ರಮಾಣದಲ್ಲಿ ಹೃದಯಾಘಾತ ಸಂಭವಿಸಿದೆ.
“ಸಹೋದರ ರಾಜು ಜತೆ ಲಕ್ಷ್ಮೀರೆಡ್ಡಿ ಶ್ರೀನು ಎಂಬಾತನು ಅವತಾರ್ ಸಿನಿಮಾ ನೋಡಲು ತೆರಳುತ್ತಿದ್ದ. ಸಿನಿಮಾ ವೀಕ್ಷಿಸುವಾಗಲೇ ಆತನಿಗೆ ಹೃದಯಾಘಾತವಾಗಿದೆ. ಕೂಡಲೇ ಅವನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿದ್ದಾನೆ ಎಂಬುದಾಗಿ ವೈದ್ಯರು ತಿಳಿಸಿದರು” ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
“ಸಿನಿಮಾ ನೋಡುವಾಗ ಶ್ರೀನುವಿನ ರಕ್ತದೊತ್ತಡ ಜಾಸ್ತಿಯಾಗಿದೆ. ಇದಾದ ಬಳಿಕ ಆತನಿಗೆ ತೀವ್ರವಾಗಿ ಹೃದಯಾಘಾತ ಸಂಭವಿಸಿದೆ” ಎಂದು ವೈದ್ಯರು ತಿಳಿಸಿದ್ದಾರೆ. 2010ರಲ್ಲಿ ಅವತಾರ್ ಪಾರ್ಟ್ 1 ಸಿನಿಮಾ ವೀಕ್ಷಿಸುವಾಗಲೂ ತೈವಾನ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದ. ಅವತಾರ್ 2 ಡಿಸೆಂಬರ್ 16ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ.
ಇದನ್ನೂ ಓದಿ | Avatar: The Way of Water | ಅವತಾರ್-2 ಭಾರತದಲ್ಲಿ ಮೊದಲ ದಿನದ ಕಲೆಕ್ಷನ್ ಎಷ್ಟು?