ಲಖನೌ: ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಗಣೇಶೋತ್ಸವದ ಹಿನ್ನೆಲೆಯಲ್ಲಿ ಆಂಜನೇಯನ ವೇಷ ಧರಿಸಿ ನೃತ್ಯ ಮಾಡುವಾಗಲೇ ಕುಸಿದು ಮೃತಪಟ್ಟಿದ್ದಾರೆ. ಮೈನ್‌ಪುರಿ ಜಿಲ್ಲೆ ಬನ್ಶಿಗೌರದ ಶಿವ ದೇವಾಲಯದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದು, ರಾತ್ರಿ ಭಜನೆ ಮಾಡಲಾಗುತ್ತಿತ್ತು. ರವಿ ಶರ್ಮಾ (35) ಎಂಬುವರು ಆಂಜನೇಯನ ವೇಷ ಧರಿಸಿ ಇದೇ ವೇಳೆ ನೃತ್ಯ ಮಾಡುತ್ತಿದ್ದರು. ಹೀಗೆ ನೃತ್ಯ ಮಾಡುವಾಗಲೇ ಕುಸಿದು ಮೃತಪಟ್ಟಿದ್ದಾರೆ. ಈ ವಿಡಿಯೊ ಈಗ ವೈರಲ್ (Viral Video) ಆಗಿದೆ.
ರವಿ ಶರ್ಮಾ ಅವರು ಭಜನೆ ಮಂಡಳಿ ತಂಡದ ಸದಸ್ಯರಾಗಿದ್ದು, ಗಣೇಶೋತ್ಸವದ ಹಿನ್ನೆಲೆಯಲ್ಲಿ ತಂಡದ ಜತೆ ಶಿವ ದೇವಾಲಯಕ್ಕೆ ಆಗಮಿಸಿದ್ದರು. ಅವರು ನೃತ್ಯ ಮಾಡುವಾಗಲೇ ಕುಸಿದಿದ್ದು, ಮೊದಲಿಗೆ ಅಲ್ಲಿ ನೆರೆದಿದ್ದ ಜನ ಇದನ್ನು ಗಮನಿಸಿರಲಿಲ್ಲ. ಇದು ಸಹ ನೃತ್ಯದ ಭಾಗವೇ ಆಗಿರಬೇಕು ಎಂದು ಒಂದಷ್ಟು ಜನ ಭಾವಿಸಿದ್ದರು. ಆದರೆ, ಕೆಲ ಹೊತ್ತಿನ ಬಳಿಕ ರವಿ ಶರ್ಮಾ ಅವರು ನಿಜವಾಗಿಯೂ ಕುಸಿದು ಬಿದ್ದಿದ್ದಾರೆ ಎಂಬುದನ್ನು ಜನ ಗಮನಿಸಿದ್ದಾರೆ.
ಕುಸಿದು ಬಿದ್ದ ರವಿ ಶರ್ಮಾ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಹೃದಯಾಘಾತದಿಂದ ಕಲಾವಿದ ರವಿ ಶರ್ಮಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗಣೇಶೋತ್ಸವದಲ್ಲಿ ಆಂಜನೇಯನ ಪಾತ್ರ ಧರಿಸಿ ನೃತ್ಯ ಮಾಡುವಾಗಲೇ ಮೃತಪಟ್ಟಿರುವ ಕಾರಣ ಸಾವಿರಾರು ಜನ ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನದ ಬಳಿ ಗಣೇಶೋತ್ಸವ ಫೈಟ್; ಹಿಂದು ಸಂಘಟನೆ ಜತೆಗೆ ಜಮೀರ್ ಅಹ್ಮದ್ ಗಣೇಶ ಪೂಜೆ