ನವದೆಹಲಿ: ಬಾಯಿಗೆ ಬ್ರೇಕ್ ಹಾಕದೆ ಮಾತನಾಡುವವರ ಹಾಗೆ ಬಾಯಿಗೆ ಬೀಗ ಹಾಕದೆ ತಿನ್ನುವವರೂ ಇದ್ದಾರೆ. ಅಂತಹವರನ್ನು ತಿಂಡಿಪೋತ ಅಥವಾ ತಿಂಡಿಪೋತಿ ಎಂದು ಕರೆಯುತ್ತೇವೆ. ಹೀಗೆ, ಯಾವಾಗಲೂ ಮೆಲ್ಲುವವರಿಗೆಂದೇ ದಿಲ್ಲಿಯ ಬ್ಲಾಗರ್ ರಜನೀಶ್ ಜ್ಞಾನಿ ಎಂಬುವರು “ಆರ್ ಯು ಹಂಗ್ರಿ” ಎಂಬ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್ (Viral Video) ಹೊಂದಿದ್ದಾರೆ. ಅವರು ಹಾಕುವ ತಿಂಡಿ ತಿನ್ನುವ ಚಾಲೆಂಜ್ ಸ್ವೀಕರಿಸಿ, ಗೆದ್ದರೆ ಕೈತುಂಬ ಹಣ ನೀಡುತ್ತಾರೆ.
ಹೀಗೆ, ರಜನೀಶ್ ಜ್ಞಾನಿ ಅವರು ೩೦ ನಿಮಿಷದಲ್ಲಿ ೨೧ ಪ್ಲೇಟ್ ಚೋಲೆ ಕುಲ್ಚೆ ತಿಂದವರಿಗೆ ೫೦ ಸಾವಿರ ರೂ. ಬಹುಮಾನದ ಬದಲು ಬುಲೆಟ್ ಬೈಕ್ ಘೋಷಿಸಿದ್ದಾರೆ. ಇವರ ಚಾಲೆಂಜ್ ಸ್ವೀಕರಿಸಿದ “ತಿಂಡಿಭೂಪ”ನೊಬ್ಬ ೩೦ ನಿಮಿಷದಲ್ಲಿ ೨೧ ಪ್ಲೇಟ್ ತಿನ್ನುವ ಮೂಲಕ ಬುಲೆಟ್ ಬೈಕ್‌ಅನ್ನು ತನ್ನದಾಗಿಸಿಕೊಂಡಿದ್ದಾನೆ. ದಿಲ್ಲಿಯ ಚೋಲೆ ಕುಲ್ಚೆ ರೆಸ್ಟೋರೆಂಟ್‌ನಲ್ಲಿ ವ್ಯಕ್ತಿಯು ಗಬಗಬನೆ ತಿಂದಿರುವ ವಿಡಿಯೊ ಈಗ ವೈರಲ್ ಆಗಿದೆ.
ರಜನೀಶ್ ಜ್ಞಾನಿ ಅವರು ಇದುವರೆಗೆ “ತಿಂಡಿ ಚಾಲೆಂಜ್” ಸ್ವೀಕರಿಸುವವರಿಗೆ ೫೦ ಸಾವಿರ ರೂ. ಬಹುಮಾನ ನೀಡುತ್ತಿದ್ದರು. ಈಗ ಬಹುಮಾನವನ್ನು ಬುಲೆಟ್ ಬೈಕ್‌ಗೆ ಬಡ್ತಿ ನೀಡಿದ್ದಾರೆ. ಹಾಗೊಂದು ವೇಳೆ ಚಾಲೆಂಜ್ ಸ್ವೀಕರಿಸಿದ ವ್ಯಕ್ತಿಯು ತಿಂಡಿ ತಿನ್ನದೆ, ಸೋಲೊಪ್ಪಿಕೊಂಡರೆ ಚೋಲೆ ಕುಲ್ಚೆಯ ೨,೧೦೦ ರೂ. ಬಿಲ್ ಕಟ್ಟಬೇಕು. ಆದರೆ, ೨೧ ಚೋಲೆ ಕುಲ್ಚೆ ತಿಂದು ವ್ಯಕ್ತಿಯೊಬ್ಬ ಗೆಲುವಿನ ನಗೆ ಬೀರಿದ್ದಾನೆ. ಈ ವಿಡಿಯೊವನ್ನು ಒಂದು ಕೋಟಿಗೂ ಅಧಿಕ ಜನ ನೋಡಿದ್ದಾರೆ.
ಇದನ್ನೂ ಓದಿ | Viral Video | ಪುಟ್ಟ ಕಂದಮ್ಮ ತನ್ನ ತಾಯಿಗೆ ದೋಸೆ ಕೊಡುತ್ತಿರುವುದು ನೋಡಿದರೆ ಮನ ಪುಳಕಿತವಾಗದೆ ಇರದು!