Site icon Vistara News

Video| ಮುಂಬಯಿಯಲ್ಲಿ ಯುಟ್ಯೂಬ್​ ವಿಡಿಯೊ ಮಾಡುತ್ತಿದ್ದ ಕೊರಿಯನ್​ ಯುವತಿಗೆ ಮುತ್ತಿಡಲು ಬಂದ ಹುಡುಗ; ನಡುಬೀದಿಯಲ್ಲಿ ದೌರ್ಜನ್ಯ

Man harasses Korean YouTuber try to kiss her in Mumbai

ಮುಂಬಯಿ ನಗರದ ರಸ್ತೆಯಲ್ಲಿ ಅದೇನೋ ಲೈವ್​ ವಿಡಿಯೊ ಮಾಡುತ್ತಿದ್ದ ಕೊರಿಯನ್​ ಮೂಲದ ಯೂಟ್ಯೂಬರ್ ಮೇಲೆ ಮಧ್ಯ ರಸ್ತೆಯಲ್ಲೇ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬುಧವಾರ ರಾತ್ರಿ 8ಗಂಟೆ ಹೊತ್ತಿಗೆ ಆ ಯುವತಿ ಸೆಲ್ಫಿ ಕ್ಯಾಮರಾ ಹಿಡಿದುಕೊಂಡು ರಸ್ತೆ ಮೇಲೆ ನಡೆಯುತ್ತಿದ್ದಳು. ಆಕೆ ಏನೋ ವ್ಲಾಗ್​ ಮಾಡುತ್ತಿದ್ದಳು. ಆಗ ಅಲ್ಲಿಗೆ ಬಂದ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಆ ವಿಡಿಯೊ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಯುವತಿ ಕ್ಯಾಮರಾ ಹಿಡಿದು ಏನೋ ಹೇಳುತ್ತಿದ್ದಾಗ, ಆ ಕ್ಯಾಮರಾಕ್ಕೆ ಮುಖ ತೋರಿಸಿದ ಯುವಕ ಮೊದಲು ಯುವತಿಯ ಕೈ ಹಿಡಿದು ಎಳೆದುಕೊಂಡು ಹೋಗಿದ್ದಾನೆ. ಒಂದು ಬದಿಗೆ ಕರೆದುಕೊಂಡು ಹೋಗಿ ಆಕೆಗೆ ಮೋಟಾರ್​ ಬೈಕ್​ ತೋರಿಸುತ್ತ ಅದೇನೋ ಹೇಳಿದ್ದಾನೆ. ಆಗ ಆಕೆ ಕೈ ಅಲ್ಲಾಡಿಸುತ್ತ ನೋ ಅಂದಿದ್ದಾಳೆ. ಮತ್ತೆ ಮುಂದುವರಿದ ಆತ, ಯುವತಿಯ ಹೆಗಲ ಮೇಲೆ ಕೈ ಹಾಕಿ ಅವಳಿಗೆ ಚುಂಬಿಸಲು ಯತ್ನಿಸಿದ್ದಾನೆ. ಅಂತೂ ಹೇಗೋ ಬಿಡಿಸಿಕೊಂಡ ಯುವತಿ ಮುಂದೆ ಬಂದರೆ, ಕೆಲ ಸಮಯದ ನಂತರ ಬೈಕ್​​ನಲ್ಲಿ ಹಿಂಬಾಲಿಸಿಕೊಂಡು ಬಂದು ಚುಡಾಯಿಸಿ ಹೋಗಿದ್ದಾನೆ.

ಯುವತಿಯನ್ನು ಆ ಹುಡುಗ ಚುಡಾಯಿಸುವಾಗ ಅಲ್ಲಿ ಹಲವರು ಹಾದು ಹೋಗುತ್ತಾರೆ. ಆದರೆ ಯಾರೊಬ್ಬರೂ ಆಕೆಯ ಸಹಾಯಕ್ಕೆ ಬರುವುದಿಲ್ಲ. ಯುವಕನನ್ನು ತಡೆಯಲೂ ಮುಂದಾಗುವುದಿಲ್ಲ. ಈ ವಿಡಿಯೊವನ್ನು ಆದಿತ್ಯ ಎಂಬುವರು ಟ್ವಿಟರ್​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಆದಿತ್ಯ ಶೇರ್ ಮಾಡಿಕೊಂಡ ವಿಡಿಯೊವನ್ನು ಆ ಕೊರಿಯನ್​ ಯುವತಿ ಕೂಡ ರೀಟ್ವೀಟ್ ಮಾಡಿಕೊಂಡು ‘ನಾನು ರಾತ್ರಿ ಸಮಯದಲ್ಲಿ ಯೂಟ್ಯೂಬ್​ ಲೈವ್​ ಮಾಡುತ್ತಿದ್ದೆ. ಆಗ ಯುವಕನೊಬ್ಬ ಬಂದು ದೌರ್ಜನ್ಯ ಎಸಗಿದೆ. ಆ ಸಂದರ್ಭದಲ್ಲಿ ಅತ್ಯಂತ ಶಾಂತವಾಗಿ ಇರಲು ನಿರ್ಧರಿಸಿದೆ. ಯಾಕೆಂದರೆ ಯುವಕನೊಂದಿಗೆ ಅವನ ಸ್ನೇಹಿತ ಕೂಡ ಇದ್ದ. ವಿಡಿಯೊ ನೋಡಿದ ಕೆಲವರು ನನಗೇ ಬೈದಿದ್ದಾರೆ. ನಾನು ವಿಡಿಯೊಕ್ಕಾಗಿ ಸಾರ್ವಜನಿಕರ ಬಳಿ ತುಂಬ ಸ್ನೇಹಮಯವಾಗಿ ವರ್ತಿಸಿ, ಅವರ ಬಳಿ ಫ್ರೆಂಡ್ಲಿಯಾಗಿ ಮಾತನಾಡುವುದಕ್ಕೇ ಹೀಗೆಲ್ಲ ಆಗುತ್ತದೆ ಎಂದಿದ್ದಾರೆ. ನಾನು ಈ ಬಗ್ಗೆಯೂ ಯೋಚಿಸಬೇಕಾಗಿದೆ’ ಎಂದು ಹೇಳಿದ್ದಾರೆ.

Exit mobile version