ಭೋಪಾಲ್: ಲಾಟರಿ ಟಿಕೆಟ್ನಿಂದ ರಾತ್ರೋರಾತ್ರಿ ಕೋಟ್ಯಧೀಶ್ವರರಾದವರ ಕಥೆ ನಾವು ಕೇಳಿದ್ದೇವೆ. ಇಂಥ ಲಾಟರಿ, ಆನ್ಲೈನ್ ಆಟಗಳನ್ನು ಆಡುವಾಗ ಅದೃಷ್ಟ ಒಲಿದರೆ ಕೈತುಂಬ ಹಣ ಬರುತ್ತದೆ. ಆದರೆ ಎಚ್ಚರಿಕೆಯೂ ಅತ್ಯಗತ್ಯ. ಇದು ಗೀಳಾಗಿ, ಕೈಯಲ್ಲಿದ್ದ ಹಣವನ್ನು ಕಳೆದುಕೊಳ್ಳುವ ಅಪಾಯವೂ ಇದ್ದೇಇದೆ. ಹೀಗೆ ಮಧ್ಯಪ್ರದೇಶದ (Madhya Pradesh) ಬರ್ವಾನಿ ಜಿಲ್ಲೆಯ ಚಾಲಕನೊಬ್ಬ ಆನ್ಲೈನ್ ಕ್ರಿಕೆಟ್ ಆಟದಲ್ಲಿ 49 ರೂಪಾಯಿ ಹಾಕಿ, ಅದಕ್ಕೆ ಪ್ರತಿಯಾಗಿ 1.5 ಕೋಟಿ ರೂಪಾಯಿ ಲಾಭ ಪಡೆದಿದ್ದಾರೆ. ಗೇಮಿಂಗ್ ಆಪ್ನಲ್ಲಿ ಇರುವ 49 ರೂಪಾಯಿ ಕೆಟೆಗರಿಯಲ್ಲಿ ವರ್ಚ್ಯುವಲ್ ಕ್ರಿಕೆಟ್ ತಂಡವನ್ನು ರಚಿಸಿ, ಅದರಲ್ಲಿ ಆಟವಾಡಿ ಮೊದಲ ಸ್ಥಾನಕ್ಕೆ ಏರಿ ಹಣ ಗೆದ್ದಿದ್ದಾರೆ.
ಈ ವ್ಯಕ್ತಿ ಹೆಸರು ಶಹಾಬುದ್ದೀನ್ ಮಾನ್ಸುರಿ. ಕಳೆದ ಎರಡು ವರ್ಷಗಳಿಂದಲೂ ಹೀಗೆ ಆನ್ಲೈನ್ ಕ್ರಿಕೆಟ್ ಆಟದಲ್ಲಿ ತಂಡಗಳನ್ನು ರಚಿಸಿ, ಆಡುವ ಮೂಲಕ ಅದೃಷ್ಟ ಪರೀಕ್ಷೆಯನ್ನು ಮಾಡುತ್ತಲೇ ಇದ್ದೆ. ಭಾನುವಾರ ಕೋಲ್ಕತ್ತ-ಪಂಜಾಬ್ ಕ್ರಿಕೆಟ್ ಮ್ಯಾಚ್ ಇದ್ದಾಗ ಟೀಂ ರಚಿಸಿದ್ದು ಸಾರ್ಥಕವಾಯ್ತು ಎಂದು ಮಾನ್ಸುರಿ ಹೇಳಿಕೊಂಡಿದ್ದಾರೆ. ಅವರು ಗೆದ್ದ 1.5 ಕೋಟಿ ರೂಪಾಯಿಯಲ್ಲಿ ಅವರೀಗ ತಮ್ಮ ಆ್ಯಪ್ ವಾಲೆಟ್ನಿಂದ 20 ಲಕ್ಷ ರೂಪಾಯಿ ವಿತ್ಡ್ರಾ ಮಾಡಿಕೊಂಡಿದ್ದಾರೆ. ಅದರಲ್ಲಿ 6 ಲಕ್ಷ ರೂಪಾಯಿ ತೆರಿಗೆ ಕಡಿತಗೊಂಡು, 14 ಲಕ್ಷ ರೂಪಾಯಿ ಬ್ಯಾಂಕ್ ಅಕೌಂಟ್ಗೆ ಕ್ರೆಡಿಟ್ ಆಗಿದೆ. ಸದ್ಯ ಮಧ್ಯಪ್ರದೇಶದ ಸೇಂದ್ವಾ ಎಂಬಲ್ಲಿ ಬಾಡಿಗೆ ಮನೆಯಲ್ಲಿರುವ ಈಗ ಬಂದಿರುವ ಹಣದಲ್ಲಿ ಮೊದಲೊಂದು ಮನೆ ಕಟ್ಟುತ್ತೇನೆ ಎಂದು ಹೇಳಿದ್ದಾರೆ. ಹಾಗೇ, ಉಳಿದ ಹಣದಲ್ಲಿ ಯಾವುದಾದರೂ ಒಂದು ಸ್ವಂತ ಉದ್ಯಮ ಶುರು ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Azadi Quest : ಮೊಬೈಲ್ ಆಟಗಳ ಸರಣಿಯ ಡಿಜಿಟಲ್ ಕಲಿಕೆಯ ಅನುಭವ
ಸ್ವಲ್ಪ ದಿನಗಳ ಹಿಂದೆ ಪಂಜಾಬ್ನಿಂದ ಇಂಥದ್ದೇ ಒಂದು ಸುದ್ದಿ ಹೊರಬಿದ್ದಿತ್ತು. 35-40ವರ್ಷಗಳಿಂದ ನಿರಂತರವಾಗಿ ಲಾಟರಿ ಟಿಕೆಟ್ ಖರೀದಿ ಮಾಡುತ್ತಿದ್ದ 88 ವರ್ಷದ ವೃದ್ಧ ಮಹಾಂತ ದ್ವಾರಕಾ ದಾಸ್ ಎಂಬುವರಿಗೆ 5 ಕೋಟಿ ರೂಪಾಯಿ ಒಲಿದಿತ್ತು. ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಅವರು ಖರೀದಿ ಮಾಡಿದ್ದ ವಿಶೇಷ ಲಾಟರಿ ಟಿಕೆಟ್ ಅವರಿಗೆ ಭರ್ಜರಿ ಹಣ ತಂದುಕೊಟ್ಟಿತ್ತು. ನಾನು ಈ ಹಣವನ್ನು ನನ್ನಿಬ್ಬರು ಮಕ್ಕಳಿಗೆ ಕೊಡುತ್ತೇನೆ ಎಂದೂ ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸ್ಥಳೀಯವಾಗಿ ಅವರೊಂದು ಡೇರಾ (ಸಾಮಾಜಿಕ-ಧಾರ್ಮಿಕ ಸಂಸ್ಥೆ)ವನ್ನು ನಡೆಸುತ್ತಿದ್ದು, ಅದಕ್ಕಾಗಿಯೂ ಹಣ ಬಳಸಿಕೊಳ್ಳುವುದಾಗಿ ತಿಳಿಸಿದ್ದರು. ಜೀವನದ ಇಳಿ ವಯಸ್ಸಿನಲ್ಲಿ ಕೋಟ್ಯಧಿಪತಿಯಾಗಿದ್ದರು.