ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರು ಇರುತ್ತಾರೆ ಎಂದು ನಾವು ಕೇಳಿದ್ದೇವೆ. ಅದನ್ನು ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಸಾಕ್ಷೀಕರಿಸಿದ್ದಾರೆ. ಸ್ನೇಹಿತ ಮೃತಪಟ್ಟ ನಂತರ ಆ ದುಃಖ ತಾಳಲಾರದೆ ಅವನ ಚಿತೆಗೇ ಹಾರಿ ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಹಲವರ ಬಾಯಲ್ಲಿ ಚರ್ಚೆಯ ವಿಷಯವಾಗಿದೆ. ಹಳೇ ಕಾಲದಲ್ಲಿ ಇದ್ದ ಸತಿ ಸಹಗಮನ ಪದ್ಧತಿಗೆ ಇದನ್ನು ಹೋಲಿಸುತ್ತಿದ್ದಾರೆ. ಸತಿ ಸಹಗಮನ ಅಂದರೆ ಪತಿ ಪ್ರಾಣಬಿಟ್ಟು, ಅವನನ್ನು ಚಿತೆಗೆ ಏರಿಸಿದಾಗ, ಪತ್ನಿಯೂ ಅದೇ ಚಿತೆಗೆ ಹಾರಿ ಮೃತಪಡುವ ಒಂದು ಅನಿಷ್ಠ ಪದ್ಧತಿ 18ನೇ ಶತಮಾನದಲ್ಲಿ ವ್ಯಾಪಕವಾಗಿತ್ತು. ಅದೀಗ ಸಂಪೂರ್ಣ ನಿಷೇಧಗೊಂಡಿದೆ. ಈಗ ಈ ವ್ಯಕ್ತಿಯ ಸಾವು, ಅದೇ ಪದ್ಧತಿಯನ್ನು ಮತ್ತೊಮ್ಮೆ ನೆನಪಿಗೆ ತಂದಿದೆ.
ಉತ್ತರ ಪ್ರದೇಶದ ನಾಗ್ಲಾ ಖಂಗರ್ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿಯಾಗಿದ್ದ ಅಶೋಕ್ (42) ಎಂಬುವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಶನಿವಾರ ಮುಂಜಾನೆ ಅವರು ಮೃತಪಟ್ಟಿದ್ದಾರೆ. ಮಧ್ಯಾಹ್ನ 11ಗಂಟೆ ಹೊತ್ತಿಗೆ ಯಮುನಾ ನದಿ ತೀರದಲ್ಲಿ ಅಶೋಕ್ನ ಅಂತ್ಯಕ್ರಿಯೆ ನಡೆಯುತ್ತಿತ್ತು. ಅದರಲ್ಲಿ ಅವರ ಸ್ನೇಹಿತ ಆನಂದ್ ಮತ್ತು ಇತರರು ಪಾಲ್ಗೊಂಡಿದ್ದರು. ಚಿತೆ ಉರಿಯುತ್ತಿತ್ತು, ನಿಧಾನಕ್ಕೆ ಎಲ್ಲರೂ ಅಲ್ಲಿಂದ ಹೊರಟಿದ್ದರು. ಅಷ್ಟರಲ್ಲಿ ಆನಂದ್ ಹೋಗಿ ಅದೇ ಚಿತೆಗೆ ಹಾರಿದ್ದಾರೆ. ಬೆಂಕಿಯಲ್ಲಿ ಬೇಯುತ್ತಿದ್ದ ಅವರನ್ನು, ಅಲ್ಲಿದ್ದವರೇ ಹೊರತೆಗೆದು ಆಗ್ರಾ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವಿಪರೀತವಾಗಿ ಸುಟ್ಟಗಾಯಗಳಾಗಿದ್ದ ಪರಿಣಾಮ ಆನಂದ್ ಬದುಕಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆನಂದ್ ಮನೆಯವರನ್ನೂ ಸಂಪರ್ಕಿಸುವ ಪ್ರಯತ್ನ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Holi 2023 : ಇಲ್ಲಿ ಚಿತೆಯ ಭಸ್ಮವೇ ಬಣ್ಣ! ಸ್ಮಶಾನವೇ ಹೋಳಿ ಮೈದಾನ! ಮಸಣ ಹೋಳಿಯ ವಿಶೇಷತೆಯಿದು