Site icon Vistara News

ಹರಕೆ ತೀರಿಸಲು ದೇವರಿಗೆ ಮೇಕೆ ಬಲಿ ಕೊಟ್ಟ; ಅದೇ ಮೇಕೆಯ ಕಣ್ಣು ಇವನ ಜೀವ ತೆಗೆಯಿತು!

Goat

‘ಹೇ ದೇವರೇ, ನನಗೆ ಒಳ್ಳೆಯದು ಮಾಡು, ನಾನಂದುಕೊಂಡಿದ್ದು ನೆರವೇರಿದರೆ ಒಂದು ಮೇಕೆಯನ್ನು ಬಲಿಕೊಡುತ್ತೇನೆ (Sacrificed Goat)’ ಎಂದು ದೇವರ ಬಳಿ ಬೇಡಿಕೊಂಡವ, ಮೇಕೆಯನ್ನು ಬಲಿಕೊಟ್ಟು, ಬಳಿಕ ಅದೇ ಮೇಕೆಯ ಕಣ್ಣಿನಿಂದ ಜೀವ ಕಳೆದುಕೊಂಡಿದ್ದಾನೆ. ಇದೊಂದು ವಿಚಿತ್ರ ಸ್ಟೋರಿ. ಛತ್ತೀಸ್​ಗಢದ ಸುರ್ಜಾಪುರದಲ್ಲಿ ನಡೆದಿದೆ. ಮದನ್​ಪುರ ಗ್ರಾಮದ ನಿವಾಸಿ 50ವರ್ಷದ ಬಾಗರ್​ ಸಾಯ್​ ಎಂಬಾತನನ್ನು ಮೇಕೆ ‘ಕಣ್ಣು‘ ಕೊಂದು ಬಿಟ್ಟಿದೆ.

ಬಾಗರ್ ಸಾಯ್​ ಹರಕೆ ಹೊತ್ತು, ಅದು ನೆರವೇರಿದ ಖುಷಿಯಲ್ಲಿ ಇದ್ದ. ಹಾಗೇ, ಮೇಕೆಯನ್ನು ಬಲಿಕೊಡಲೆಂದು ಅದೇ ಸುರ್ಜಾಪುರ ಜಿಲ್ಲೆಯ ಮದನ್​​ಪುರದಲ್ಲಿರುವ ಖೋಪಾ ದೇವಸ್ಥಾನಕ್ಕೆ ಹೋದ. ಅದೇ ದೇವರಿಗೆ ಬಲಿ ಕೊಡುವುದಾಗಿ ಹರಕೆ ಹೊತ್ತಿದ್ದರಿಂದ ತನ್ನ ಒಂದಷ್ಟು ಆಪ್ತರನ್ನು ಕರೆದುಕೊಂಡು, ಮೇಕೆಯನ್ನು ತೆಗೆದುಕೊಂಡು ಹೋದ. ದೇವಸ್ಥಾನದಲ್ಲಿ ಎಲ್ಲ ಪೂಜೆ, ಆಚರಣೆ ಮುಗಿದ ಮೇಲೆ ಮೇಕೆಯನ್ನು ಬಲಿಕೊಡಲಾಯಿತು.

ಬಾಗರ್​ ಸಾಯ್​ಗೆ ಅದೇನೋ ತೃಪ್ತಿ. ನಾನು ಹರಕೆ ತೀರಿಸಿದೆ ಎನ್ನುವ ಖುಷಿ. ಬಳಿಕ ಮೇಕೆಯ ಮಾಂಸದ ಅಡುಗೆ ಸಿದ್ಧವಾಯಿತು. ಪ್ರಸಾದದ ಊಟಕ್ಕೆ ಬರುವಂತೆ ಅವನು ಇನ್ನೂ ಕೆಲವರನ್ನು ಕರೆದಿದ್ದ. ಭರ್ಜರಿ ಮಟನ್​ ತಯಾರಾಗುತ್ತಿತ್ತು. ಅದರ ಪರಿಮಳ ಊರಿಗೇ ಹಬ್ಬಿತ್ತು. ಹಾಗೇ, ಊಟದ ಸಮಯವೂ ಬಂತು. ಬಾಗರ್ ಸಾಯ್ ಸೇರಿ ಎಲ್ಲರೂ ಊಟ ಶುರು ಮಾಡಿದರು. ಊಟದ ಎಲೆಯಲ್ಲಿ ಮಟನ್ ಪೀಸ್​, ಗ್ರೇವಿ ಎಲ್ಲ ಇತ್ತು. ಮಾತು-ಕತೆ-ಊಟವೆಲ್ಲ ಜೋರಾಗಿಯೇ ಇತ್ತು..ಆದರೆ..ಬಾಗರ್ ಸಾಯ್​ ಸಾವೂ ಕೂಡ ಅದೇ ಊಟದ ಎಲೆಯಲ್ಲೇ ಇತ್ತು!

ಬಾಗರ್​ ಸಾಯ್​ ತಟ್ಟೆಯಲ್ಲಿ ಮೇಕೆಯ ಒಂದು ಕಣ್ಣು ಇತ್ತು. ಅದನ್ನು ಅವನು ಬಾಯಿಗೆ ಹಾಕಿಕೊಂಡ. ಅದರ ರುಚಿ ಸವಿಯಬೇಕು ಎನ್ನುವಷ್ಟರಲ್ಲಿ ಆ ಕಣ್ಣು ಹೋಗಿ ಬಾಗರ್ ಗಂಟಲಲ್ಲಿ ಕೂತಿತ್ತು. ಗಂಟಲಲ್ಲಿ ಸಿಕ್ಕಿಕೊಂಡು ಅವನು ಕೆಮ್ಮಲು ಶುರು ಮಾಡಿದ. ಅದು ಬಾಯಿಗೂ ಬರಲಿಲ್ಲ, ಹೊಟ್ಟೆಗೂ ಹೋಗಲಿಲ್ಲ. ಬರುಬರುತ್ತ ಉಸಿರಾಟವೇ ಕ್ಷೀಣವಾಯಿತು. ಅಲ್ಲಿದ್ದವರು ಬಾಗರ್​ನನ್ನು ಕಾಪಾಡಲು ಪ್ರಯತ್ನ ಮಾಡಿದರು. ಆಸ್ಪತ್ರೆಗೂ ಕರೆದೊಯ್ದರು. ಆದರೆ ಸಾಧ್ಯವಾಗಲಿಲ್ಲ. ಅವನೇ ಬಲಿಕೊಟ್ಟ ಮೇಕೆಯ ಕಣ್ಣಿನಿಂದಲೇ ಬಾಗರ್ ಜೀವ ಹೋಗಿತ್ತು.

ಇದನ್ನೂ ಓದಿ:JDS Pancharatna: ಆನೇಕಲ್‌ನಲ್ಲಿ ಪಂಚರತ್ನ ಯಾತ್ರೆ ಯಶಸ್ಸಿಗಾಗಿ ಕುರಿ ಬಲಿ ಕೊಟ್ಟ ಅಭಿಮಾನಿಗಳು

ಹೀಗೆ ಬಾಗರ್​ ಸಾಯುತ್ತಿದ್ದಂತೆ ಹಳ್ಳಿಗರು ಗುಸುಗುಸು ಶುರು ಮಾಡಿದರು. ದೇವರಿಗೆ ಈ ಬಲಿ ಇಷ್ಟವಾಗಲಿಲ್ಲ. ಹೀಗಾಗಿ ಬಾಗರ್​ ಜೀವವೂ ಹೋಗಿದೆ ಎಂದೇ ಹೇಳುತ್ತಿದ್ದಾರೆ. ಆದರೆ ಅದರಲ್ಲೇ ಸ್ವಲ್ಪ ಓದಿಕೊಂಡ ಯುವಕರು, ಏನಿಲ್ಲ, ಗಂಟಲಲ್ಲಿ ಏನಾದರೂ ಸಿಕ್ಕಿಬಿದ್ದರೆ, ಅದನ್ನು ಫಟ್ಟನೆ ತೆಗೆಯದೆ ಇದ್ದರೆ, ಜೀವ ಹೋಗುತ್ತದೆ ಎಂದಿದ್ದಾರೆ.

Exit mobile version