Site icon Vistara News

SpiceJet: ಟಿಕೆಟ್‌ ಇದ್ದರೂ ಮುಂಬೈನಿಂದ ಬೆಂಗಳೂರಿಗೆ ವಿಮಾನದ ಟಾಯ್ಲೆಟ್‌ನಲ್ಲೇ ಬಂದ ವ್ಯಕ್ತಿ; ಏಕೆ?

SpiceJet Flight

Man on Mumbai-Bengaluru SpiceJet flight stuck inside toilet for entire journey

ಬೆಂಗಳೂರು: ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುವುದು, ದಟ್ಟ ಮಂಜಿನಿಂದಾಗಿ ವಿಮಾನಗಳ ಹಾರಾಟ ವಿಳಂಬವಾಗುವುದು, ವಿಮಾನಗಳಲ್ಲಿಯೇ ಸಿಬ್ಬಂದಿ ಮೇಲೆ ಪ್ರಯಾಣಿಕರು ಹಲ್ಲೆ ನಡೆಸುವುದು, ಸಹ ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತಿಸುವ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗಿವೆ. ಇದರ ಬೆನ್ನಲ್ಲೇ, ಟಿಕೆಟ್‌ ಇದ್ದರೂ ಪ್ರಯಾಣಿಕರೊಬ್ಬರು ಮುಂಬೈನಿಂದ ಬೆಂಗಳೂರಿಗೆ (Bengaluru) ಸ್ಪೈಸ್‌ಜೆಟ್‌ ವಿಮಾನದ (SpiceJet) ಟಾಯ್ಲೆಟ್‌ನಲ್ಲಿಯೇ (Lavatory) ಪ್ರಯಾಣ ಬೆಳೆಸಿರುವ ಸಂಗತಿ ಬಯಲಾಗಿದೆ.

ಹೌದು, ಮಂಗಳವಾರ (ಜನವರಿ 16) ಪ್ರಯಾಣಿಕರೊಬ್ಬರು ವಿಮಾನದ ಟಾಯ್ಲೆಟ್‌ನಲ್ಲಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ. ಮುಂಬೈನಿಂದ ದೆಹಲಿಗೆ ಹೊರಡುವ ವಿಮಾನವನ್ನು ವ್ಯಕ್ತಿ ಹತ್ತಿದ್ದಾರೆ. ವಿಮಾನ ಹತ್ತಿದವರೇ ಅವರು ಟಾಯ್ಲೆಟ್‌ಗೆ ಹೋಗಿದ್ದಾರೆ. ಆದರೆ, ಟಾಯ್ಲೆಟ್‌ ಲಾಕ್‌ ಆದ ಕಾರಣ ಅವರು ಹೊರಗೆ ಬರಲು ಸಾಧ್ಯವಾಗಿಲ್ಲ. ವಿಮಾನದ ಸಿಬ್ಬಂದಿ ನೆರವು ನೀಡಿದರೂ ಲಾಕ್‌ ತೆಗೆಯಲು ಆಗಿಲ್ಲ. ಇದರಿಂದಾಗಿ ಅವರು ಇಡೀ ಪ್ರಯಾಣವನ್ನು ಟಾಯ್ಲೆಟ್‌ನಲ್ಲಿಯೇ ಕಳೆದಿದ್ದಾರೆ. ಆ ಮೂಲಕ ಪ್ರಯಾಣದ ವೇಳೆ ಕೆಟ್ಟ ಪರಿಸ್ಥಿತಿ ಅನುಭವಿಸಿದ್ದಾರೆ.

ದುಡ್ಡು ವಾಪಸ್‌ ಎಂದ ಸ್ಪೈಸ್‌ಜೆಟ್‌

ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ಗೆ ಬರುವವರೆಗೂ ವ್ಯಕ್ತಿಯು ಟಾಯ್ಲೆಟ್‌ನಲ್ಲಿಯೇ ಕಾಲ ಕಳೆದಿದ್ದಾರೆ. ವಿಮಾನ ಲ್ಯಾಂಡ್‌ ಆದ ಬಳಿಕವೇ ಸಿಬ್ಬಂದಿಯು ಟಾಯ್ಲೆಟ್‌ ಲಾಕ್‌ ತೆಗೆಯಲು ಸಾಧ್ಯವಾಗಿದೆ. ಕೂಡಲೇ ಅವರ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಪ್ರಯಾಣಿಕನಿಗೆ ಇಂತಹ ಅವ್ಯವಸ್ಥೆಯುಂಟಾದ ಕಾರಣ ವಿಮಾನಯಾನ ಸಂಸ್ಥೆಯು ಬೇಸರ ವ್ಯಕ್ತಪಡಿಸಿದೆ. ಹಾಗೆಯೇ, ಅವರ ಟಿಕೆಟ್‌ ಮೊತ್ತವನ್ನು ಹಿಂತಿರುಗಿಸುವುದಾಗಿ ಸ್ಪೈಸ್‌ಜೆಟ್‌ ಘೋಷಣೆ ಮಾಡಿದೆ. ವ್ಯಕ್ತಿಯು ಟಾಯ್ಲೆಟ್‌ನಲ್ಲಿಯೇ ಲಾಕ್‌ ಆದ ಕಾರಣ ಬೇರೆ ಪ್ರಯಾಣಿಕರು ಟಾಯ್ಲೆಟ್‌ಗೆ ಹೋಗಲು ತುಸು ತೊಂದರೆ ಅನುಭವಿಸಿದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Air India: ವಿಮಾನದಲ್ಲಿ ‘ವೆಜ್‌’ ಪ್ಯಾಸೆಂಜರ್‌ ಊಟದಲ್ಲಿ ಸಿಕ್ಕ ಮೂಳೆಗಳು; ಮುಂದೇನಾಯ್ತು?

ವಿಮಾನ ವಿಳಂಬವಾಗಿದ್ದಕ್ಕೆ ಪೈಲಟ್‌ಗೆ ಏಟು

ಕಳೆದ ಭಾನುವಾರವಷ್ಟೇ (ಜನವರಿ 14) ವಿಮಾನದ ಹಾರಾಟ ವಿಳಂಬವಾಗಿಯಿತು ಎಂದು ಇಂಡಿಗೋ ವಿಮಾನದ ಪ್ರಯಾಣಿಕನೊಬ್ಬ ಪೈಲಟ್‌ ಮೇಲೆಯೇ ಹಲ್ಲೆ ನಡೆಸಿದ್ದ. ಇಂಡಿಗೋ ವಿಮಾನವು ದೆಹಲಿಯಿಂದ ಗೋವಾಗೆ ಹೊರಡಬೇಕಿತ್ತು. ಆದರೆ, ದೆಹಲಿಯಲ್ಲಿ ದಟ್ಟ ಮಂಜು ಕವಿದ ಕಾರಣ ವಿಮಾನದ ಹಾರಾಟ ವಿಳಂಬವಾಗಿತ್ತು. ಸುಮಾರು 13 ತಾಸು ಪ್ರಯಾಣಿಕರು ವಿಮಾನದಲ್ಲಿಯೇ ಕಾದು ಕುಳಿತಿದ್ದರು. ಇದೇ ವೇಳೆ ವಿಮಾನದ ಪೈಲಟ್‌ ಎಲ್ಲ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ವಿಮಾನ ಹಾರಾಟ ವಿಳಂಬವಾಗಿರುವ ಕುರಿತು ಹೇಳುತ್ತಿದ್ದರು. ಆದರೆ, ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಪೈಲಟ್‌ ಮೇಲೆ ಎರಗಿ, ಪೈಲಟ್‌ಗೆ ಹಲ್ಲೆ ನಡೆಸಿದ್ದ. ಆತನನ್ನು ಬಳಿಕ ಬಂಧಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version