ರುದ್ರಪುರ: 85 ಸಾವಿರ ರೂಪಾಯಿ ಬೆಲೆಯ ಟಿವಿಎಸ್ ಜ್ಯುಪಿಟರ್ ಸ್ಕೂಟರ್ ಖರೀದಿಸಲು ಸಮೀಪದ ಟಿವಿಎಸ್ ಶೋರೂಮ್ಗೆ ಹೋದ ಯುವಕನೊಬ್ಬ 50 ಸಾವಿರ ರೂಪಾಯಿ ನಾಣ್ಯಗಳನ್ನು ನೀಡಿದ್ದಾನೆ. ಅದೂ ಕೂಡ ಎಲ್ಲವೂ 10 ರೂಪಾಯಿ ನಾಣ್ಯಗಳು. ಗ್ರಾಹಕ ಕೊಟ್ಟ ನಾಣ್ಯಗಳನ್ನು ಒಲ್ಲೆ ಎನ್ನದ ಶೋರೂಮ್ ಸಿಬ್ಬಂದಿ ಅದನ್ನು ಎಣಿಸಿಕೊಂಡು, ಸ್ವೀಕರಿಸಿದ್ದಾರೆ. ಈಗೆಲ್ಲ ಏನಿದ್ದರೂ ಆನ್ಲೈನ್, ನೆಟ್ಬ್ಯಾಂಕಿಂಗ್ ಮೂಲಕ ಹಣ ಪಾವತಿ ಮಾಡುವ ಕಾಲ. ಅದರ ಮಧ್ಯೆ ಯುವಕ ಹೀಗೆ ನಾಣ್ಯಗಳನ್ನು ಕೊಟ್ಟಿದ್ದು ವಿಚಿತ್ರ ಎನ್ನಿಸಿದೆ.
ಉತ್ತರಾಖಂಡ್ನ ರುದ್ರಾಪುರದ ಈ ಯುವಕ 110 ಸಿಸಿ ಸಾಮರ್ಥ್ಯದ ಟಿವಿಎಸ್ ಜ್ಯುಪಿಟರ್ ಸ್ಕೂಟರ್ ಖರೀದಿಸಲು ಸ್ಥಳೀಯ ಶೋರೂಮ್ಗೆ ಹೋಗಿದ್ದ. ಅವನು ಆಯ್ಕೆ ಮಾಡಿದ್ದು ಸಿಂಗಲ್ ಸಿಲಿಂಡರ್ ಸ್ಕೂಟರ್ ಆಗಿದ್ದು, ಟಿವಿಎಸ್ನ ಇಕೊಥ್ರಸ್ಟ್ ಇಂಧನ ಇಂಜೆಕ್ಷನ್ ವೈಶಿಷ್ಟ್ಯವನ್ನು ಒಳಗೊಂಡಿದೆ. (ಇಕೊಥ್ರಸ್ಟ್ ಇಂಧನ ಇಂಜೆಕ್ಷನ್ ಟೆಕ್ನಾಲಜಿ ಎಂದರೆ ಮಾಲಿಕೋಟ್ ಪಿಸ್ಟನ್ ಬಳಕೆ ಮಾಡುವ ಮೂಲಕ ಎಂಜಿನ್ ಒಳಗೆ ಆಗುವ ಘರ್ಷಣೆಯನ್ನು ತಪ್ಪಿಸುವುದು. ಇದರಿಂದ ಸ್ಕೂಟರ್ನಲ್ಲಿ ಇಂಧನ ದಕ್ಷತೆ ಹೆಚ್ಚುತ್ತದೆ). ಸ್ಕೂಟರ್ ಬೆಲೆ ಈ ಶೋರೂಮ್ನಲ್ಲಿ 85,210 ರೂಪಾಯಿ ಆಗಿತ್ತು. ಅದರಲ್ಲಿ 50 ಸಾವಿರ ರೂ.ನ್ನು ನಾಣ್ಯಗಳನ್ನೇ ಕೊಟ್ಟಿರುವ ಯುವಕ, ಉಳಿದ ಹಣ ಹೇಗೆ ಪಾವತಿಸಿದ್ದಾನೆ ಎಂಬುದು ಗೊತ್ತಾಗಿಲ್ಲ.
ಇದನ್ನೂ ಓದಿ: Mahindra XUV | ಮಹೀಂದ್ರಾ ಕಾರುಗಳ ಬೆಲೆ ವರ್ಷದಲ್ಲಿ ಮೂರನೇ ಬಾರಿ ಏರಿಕೆ, ಎಷ್ಟಾಗಿದೆ ಈಗ?