ನವ ದೆಹಲಿ: ಅಮೆರಿಕದಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕುಡುಕ ಪ್ರಯಾಣಿಕನೊಬ್ಬ ಮಹಿಳಾ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು. ನವೆಂಬರ್ 26ರಂದು ಈ ಘಟನೆ ನಡೆದಿದ್ದರೂ, ಇತ್ತೀಚೆಗೆ ಮಹಿಳೆ ಏರ್ಇಂಡಿಯಾ ಅಧ್ಯಕ್ಷರಿಗೆ ಪತ್ರ ಬರೆದಾಗಲೇ ಇಂಥದ್ದೊಂದು ಅಸಹ್ಯಕರ ಘಟನೆ ನಡೆದಿದ್ದು ಜಗಜ್ಜಾಹೀರಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಅದೇ ಮಾದರಿಯ ಪ್ರಕರಣ ನಡೆದಿದ್ದು ಈಗ ಗೊತ್ತಾಗಿದೆ. ಡಿ.6ರಂದು ಪ್ಯಾರಿಸ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ, ಮದ್ಯಪಾನ ಮಾಡಿದ್ದ ಪ್ರಯಾಣಿಕನೊಬ್ಬ ತನ್ನ ಸಹಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆಕೆ ಹೊದ್ದಿದ್ದ ಹೊದಿಕೆಯ ಮೇಲೆ ಅವನು ಮೂತ್ರ ವಿಸರ್ಜಿಸಿದ್ದ ಎಂದು ವರದಿಯಾಗಿದೆ.
ಡಿಸೆಂಬರ್ 6ರಂದು ವಿಮಾನ ಪ್ಯಾರಿಸ್ನಿಂದ ದೆಹಲಿಗೆ ಬರುತ್ತಿತ್ತು. ರಾತ್ರಿ ಪ್ರಯಾಣಿಕ ಈ ಕೃತ್ಯ ನಡೆಸಿದ್ದಾನೆ. ಮಹಿಳೆ ವಿಮಾನ ಸಿಬ್ಬಂದಿಗೆ ಈ ಬಗ್ಗೆ ದೂರು ನೀಡಿದ್ದರು. ತಕ್ಷಣವೇ ಪೈಲೆಟ್, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್ಪೋರ್ಟ್ನ ಏರ್ ಟ್ರಾಫಿಕ್ ಕಂಟ್ರೋಲ್ಗೆ ದೂರು ನೀಡಿದ್ದರು. ‘ಪ್ರಯಾಣಿಕನೊಬ್ಬ ಮದ್ಯ ಸೇವಿಸಿ, ಅಮಲಿನಲ್ಲಿ ಮನಸಿಗೆ ಬಂದಂತೆ ವರ್ತಿಸುತ್ತಿದ್ದಾನೆ. ಪ್ರಯಾಣಕ್ಕೆ ಸಂಬಂಧಪಟ್ಟ ನಿಯಮಗಳ ಪಾಲನೆ ಮಾಡುತ್ತಿಲ್ಲ.
ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದಾನೆ’ ಎಂದು ಪೈಲೆಟ್ ತಿಳಿಸಿದ್ದರು. ಹೀಗಾಗಿ 9.40ರ ಹೊತ್ತಿಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಅಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಆ ಕುಡುಕ ಪ್ರಯಾಣಿಕನನ್ನು ಬಂಧಿಸಿದ್ದರು. ಆದರೆ ಬಳಿಕ ಆ ಮಹಿಳೆ ಪೊಲೀಸರಿಗೆ ದೂರು ನೀಡಿ, ಕೇಸ್ ಹಾಕಲು ನಿರಾಕರಿಸಿದ ಕಾರಣ, ಅವನನ್ನು ಬಿಟ್ಟು ಕಳಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿ, ಖಾಸಗಿ ಅಂಗ ಪ್ರದರ್ಶಿಸಿದ ಪ್ರಯಾಣಿಕ; ಏರ್ ಇಂಡಿಯಾ ಪ್ಲೈಟ್ನಲ್ಲಿ ಅಸಹ್ಯ ಘಟನೆ!