ಅಸ್ಸಾಂನಲ್ಲಿ ಪ್ರವಾಹ (Assam Flood) ಪರಿಸ್ಥಿತಿ ಮುಂದುವರಿದಿದೆ. ಬಹುತೇಕ ಪ್ರದೇಶಗಳಲ್ಲಿ ಮನುಷ್ಯರು ಮುಳುಗವಷ್ಟು ನೀರು ನಿಂತಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಒಂದಾದ ಬರಾಕ್ ಕಣಿವೆ ಪ್ರದೇಶಕ್ಕೆ ಇಂದು ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ಮಾಡಿದರು. ಅಧಿಕಾರಿಗಳೊಂದಿಗೆ ಅವರು ಬೋಟ್‌ನಲ್ಲಿ ಹೋಗಿ ಪ್ರವಾಹವನ್ನು ನೋಡಿದ್ದಾರೆ. ಒಂದು ವಾರದಿಂದಲೂ ಜಲಾವೃತವಾಗಿ ಅರ್ಧ ಮುಳುಗಡೆಯಾಗಿರುವ ಸಿಲ್ಚಾರ್‌ನಲ್ಲಿ ಜನರ ಕಷ್ಟವನ್ನು ಆಲಿಸಿದ್ದಾರೆ. ಹಿಮಂತಾ ಬಿಸ್ವಾ ಶರ್ಮಾ ಅವರು ಕೆಂಪು ನೀರಿನಲ್ಲಿ ವಾಟರ್ ಬೋಟ್ ಮೂಲಕ ಸಾಗಿ ಸಮೀಕ್ಷೆ ನಡೆಸಿದ ವಿಡಿಯೋಗಳು ಮತ್ತು ಫೋಟೊಗಳು ವೈರಲ್ ಆಗಿವೆ.
ಅಸ್ಸಾಂ ಸಿಎಂ ಹೀಗೆ ಬರಾಕ್ ಕಣಿವೆ ಪ್ರದೇಶಕ್ಕೆ ಪ್ರವಾಹ ವೀಕ್ಷಣೆಗೆ ಬಂದಾಗ ಯುವಕನೊಬ್ಬ ಮುಖ್ಯಮಂತ್ರಿಗೆ ವಿಶ್ ಮಾಡಲು ಹರಸಾಹಸ ಪಟ್ಟ ಘಟನೆ ನಡೆದಿದೆ. ಅಸ್ಸಾಂನ ಸಾಂಪ್ರಾದಾಯಿಕ ಹತ್ತಿ ಟವೆಲ್ ಆದ ಗಮೊಚಾವನ್ನು ಕೈಯಲ್ಲಿ ಹಿಡಿದಿದ್ದ ಈ ಯುವಕ ಅದನ್ನು ಮುಖ್ಯಮಂತ್ರಿಗೆ ಕೊಡಲೆಂದು ಪ್ರವಾಹದ ನೀರಿಗೆ ಇಳಿದಿದ್ದ. ಮುಳುಗುತ್ತೀಯಾ, ಈಗ ಬೇಡ ಎಂದು ಎಷ್ಟು ಹೇಳಿದರೂ ಆತ ಕೇಳಲಿಲ್ಲ. ನಂತರ ಸಿಎಂ ಜತೆಗಿದ್ದ ಸಿಬ್ಬಂದಿಯೇ ಹೋಗಿ ಅವನನ್ನು ಎತ್ತಿಕೊಂಡು ಮುಖ್ಯಮಂತ್ರಿ ಬಳಿ ಕರೆದುಕೊಂಡು ಬಂದಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಹಲವು ದಿನಗಳಿಂದಲೂ ಅಸ್ಸಾಂನಲ್ಲಿ ಪ್ರವಾಹದ ಅಬ್ಬರ. ಕಳೆದ 24ಗಂಟೆಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಅಸ್ಸಾಂನ 27ಜಿಲ್ಲೆಗಳ 2,894 ಹಳ್ಳಿಗಳ 25.10 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾರೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಮಳೆ ಅಬ್ಬರ; ಪ್ರವಾಹ, ಭೂಕುಸಿತಕ್ಕೆ 8 ಮಂದಿ ಸಾವು