ತಾವು ಯಾವುದೇ ಸಂದರ್ಭದಲ್ಲೂ ಪಕ್ಕಾ ‘ರಕ್ಷಕರು’ ಎಂಬುದನ್ನು ಉತ್ತರ ಪ್ರದೇಶ ಪೊಲೀಸರು ಸಾಕ್ಷೀಕರಿಸಿದ್ದಾರೆ. ‘ಅಯ್ಯೋ..ನನ್ನ ಹೆಂಡತಿಗೆ ಸೊಳ್ಳೆ ಕಚ್ಚುತ್ತಿದೆ’ ಎಂದು ಆಸ್ಪತ್ರೆಯಲ್ಲಿ ಕುಳಿತು ಟ್ವೀಟ್ ಮಾಡಿದ ವ್ಯಕ್ತಿಗೆ, ‘ಸೊಳ್ಳೆಬತ್ತಿ’ ತೆಗೆದುಕೊಂಡು ಹೋಗಿ ಕೊಟ್ಟು ಉಪಕಾರ ಮಾಡಿದ್ದಾರೆ.
ರಾಜ್ ಮೊಹಲ್ಲಾ ನಿವಾಸಿಯಾದ ಅಸಾದ್ ಖಾನ್ ಎಂಬಾತನ ಪತ್ನಿ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಚಂದೌಸಿಯಲ್ಲಿರುವ ಹರಿಪ್ರಕಾಶ್ ನರ್ಸಿಂಗ್ ಹೋಮ್ಗೆ ದಾಖಲಾಗಿದ್ದರು. ಆಕೆಗೆ ಅಲ್ಲಿ ಹೆಣ್ಣು ಮಗು ಜನನವಾಯಿತು. ಆದರೆ ಅಲ್ಲಿ ಸಿಕ್ಕಾಪಟೆ ಸೊಳ್ಳೆಯಿದ್ದ ಕಾರಣ ಮಹಿಳೆ ತುಂಬ ತೊಂದರೆಪಡುತ್ತಿದ್ದರು. ಹೆರಿಗೆ ನೋವೆಂದು ಆಸ್ಪತ್ರೆಗೆ ದಾಖಲಾದಾಗಿನಿಂದ, ಹೆರಿಗೆಯಾದ ಮೇಲೆಯೂ ಸೊಳ್ಳೆ ಕಚ್ಚುತ್ತಿತ್ತು. ಇದನ್ನು ನೋಡಲಾಗದೆ ಅಸಾದ್ ಖಾನ್ ‘ಹರಿಪ್ರಕಾಶ್ ನರ್ಸಿಂಗ್ ಹೋಂನಲ್ಲಿ ನನ್ನ ಪತ್ನಿ ಮಗುವಿಗೆ ಜನ್ಮ ನೀಡಿದಳು. ಅವಳಿಗೆ ಹೆರಿಗೆಯ ನೋವು ವಿಪರೀತ ಇದೆ. ಅದರೊಂದಿಗೆ ಇಲ್ಲಿ ಸಿಕ್ಕಾಪಟೆ ಸೊಳ್ಳೆಗಳು ಕಚ್ಚುತ್ತಿವೆ. ದಯವಿಟ್ಟು ನನಗೆ ಮಾರ್ಟಿನ್ ಸೊಳ್ಳೆ ಬತ್ತಿ ಒದಗಿಸಿ’ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ಉತ್ತರ ಪ್ರದೇಶದ ಪೊಲೀಸ್ ಮತ್ತು ಸಂಭಾಲ್ ನಗರದ ಪೊಲೀಸರನ್ನು ಟ್ಯಾಗ್ ಮಾಡಿದ್ದರು.
ಅದಾಗಿ ಕೆಲವೇ ನಿಮಿಷಗಳಲ್ಲಿ ಉತ್ತರ ಪ್ರದೇಶ ಪೊಲೀಸರು ಆಸ್ಪತ್ರೆಗೆ ತಲುಪಿದ್ದಾರೆ. ಪೊಲೀಸ್ ಪ್ರಧಾನ ಕಚೇರಿಯಿಂದ ಸೂಚನೆ ಬಂದಿದ್ದರಿಂದ ಅಸಾದ್ ಖಾನ್ಗೆ ತಕ್ಷಣವೇ ಸ್ಪಂದಿಸಿದ ಅವರು, ಸೊಳ್ಳೆ ಬತ್ತಿ ಹಿಡಿದುಕೊಂಡು ಆಸ್ಪತ್ರೆಗೆ ಬಂದು ಅದನ್ನು ಅಸಾದ್ ಖಾನ್ಗೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಯುಪಿ ಪೊಲೀಸರು ಟ್ವೀಟ್ ಮಾಡಿ ತಿಳಿಸಿದ್ದಾರೆ. ‘ ಹೆರಿಗೆಗಾಗಿ ನರ್ಸಿಂಗ್ಹೋಮ್ಗೆ ದಾಖಲಾಗಿದ್ದ ತನ್ನ ಪತ್ನಿಗೆ ಸೊಳ್ಳೆಗಳು ಕಚ್ಚುತ್ತಿವೆ ಎಂದು ವ್ಯಕ್ತಿಯೊಬ್ಬ ಟ್ವೀಟ್ ಮಾಡಿದ್ದರಿಂದ ಅವರಿಗೆ ಸಹಾಯ ಮಾಡುವ ಸಲುವಾಗಿ, ತ್ವರಿತವಾಗಿ ಸೊಳ್ಳೆ ಬತ್ತಿ ನೀಡಲಾಯಿತು. ಮಾಫಿಯಾವನ್ನು ಬಗ್ಗುಬಡಿಯುವುದರಿಂದ ಹಿಡಿದು, ಸೊಳ್ಳೆಗಳಿಂದ ಪರಿಹಾರ ನೀಡುವುದರವರೆಗೆ ಎಲ್ಲದಕ್ಕೂ ಸಿದ್ಧ’ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ. ಹಾಗೇ, ಅಸಾದ್ ಖಾನ್ ಕೂಡ ಉತ್ತರ ಪ್ರದೇಶ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಇದನ್ನೂ ಓದಿ: Earthquake: ದೆಹಲಿ, ಉತ್ತರ ಪ್ರದೇಶ, ಕಾಶ್ಮೀರ ಸೇರಿ ಹಲವೆಡೆ ಪ್ರಬಲ ಭೂಕಂಪ, ಆತಂಕದಲ್ಲಿ ಮನೆ ಬಿಟ್ಟು ಓಡಿದ ಜನ
ಈ ಬಗ್ಗೆ ಇಂಡಿಯಾ ಟುಡೆ ಮಾಧ್ಯಮದೊಂದಿಗೆ ಮಾತನಾಡಿದ ಅಸಾದ್ ಖಾನ್ ‘ನನ್ನ ಗರ್ಭಿಣಿ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಕೆಗೆ ಒಂದೆಡೆ ಹೆರಿಗೆ ನೋವಾದರೆ, ಇನ್ನೊಂದು ಕಡೆ ಸೊಳ್ಳೆಗಳ ಕಾಟ. ಸೊಳ್ಳೆಗಳನ್ನು ಆಕೆಗೆ ಒಂದೇ ಸಮ ಕಚ್ಚುತ್ತಿದ್ದವು. ಮಧ್ಯರಾತ್ರಿ 2.45 ಸಮಯ ಆಗಿತ್ತು. ಆಗ ಪೊಲೀಸ್ ಬಿಟ್ಟರೆ ಇನ್ಯಾರೂ ಸಹಾಯ ಮಾಡಲಾರರು ಎಂದು ನನಗೆ ಅನ್ನಿಸಿತು. ಅದೇ ಕಾರಣಕ್ಕೆ ಉತ್ತರ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದೆ. ಕೆಲವೇ ಸೆಕೆಂಡ್ಗಳಲ್ಲಿ ನನಗೆ ಅವರಿಂದ ಪ್ರತಿಕ್ರಿಯೆಯೂ ಬಂತು. 10-15ನಿಮಿಷದಲ್ಲಿ ಪೊಲೀಸರು ಸೊಳ್ಳೆಬತ್ತಿ ತಂದುಕೊಟ್ಟು ಹೋದರು. ನಾನವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.