ತೆಲಂಗಾಣ: ಇಲ್ಲಿನ ಕಾಮಾರೆಡ್ಡಿ ಜಿಲ್ಲೆಯ ಸಿಂಗರಾಯಕೊಂಡ ಅರಣ್ಯಪ್ರದೇಶದಲ್ಲಿರುವ ಬೆಟ್ಟವೊಂದರ ಗುಹೆಯಲ್ಲಿ ಯುವಕನೊಬ್ಬ ಸಿಕ್ಕಿಬಿದ್ದಿದ್ದು, ಕಳೆದ 30 ತಾಸುಗಳಿಂದಲೂ ಅವನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಯುವಕ ರಾಜು ಪಕ್ಕಾ ‘ಹನಿಟ್ರ್ಯಾಪ್’ಗೆ ಒಳಗಾಗಿದ್ದಾನೆ..!
ಸಾಮಾನ್ಯವಾಗಿ ಯಾರಾದರೂ ಅದರಲ್ಲೂ ಗಣ್ಯರು ಮಹಿಳೆಯರ ಮೋಸದ ಜಾಲಕ್ಕೆ ಬಿದ್ದರೆ ಅದನ್ನು ‘ಹನಿಟ್ರ್ಯಾಪ್’ ಎಂದು ಕರೆಯುವ ವಾಡಿಕೆ ಇದೆ. ಆದರೆ ಇಲ್ಲಿ ಗುಹೆಯಲ್ಲಿ ಸಿಕ್ಕಿಬಿದ್ದ ಯುವಕ ರಾಜು ಹಾಗೇನೂ ಆಗಿಲ್ಲ. ಬದಲಾಗಿ ಆತ ಜೇನುತುಪ್ಪ ತೆಗೆಯಲು ದಟ್ಟಾರಣ್ಯಕ್ಕೆ ಹೋಗಿ, ಅಲ್ಲಿ ಎರಡು ಬಂಡೆಗಳ ಮಧ್ಯೆ ಸಿಕ್ಕಿಬಿದ್ದಿದ್ದಾನೆ. ಹೀಗಾಗಿ ಇದೊಂದು ಪಕ್ಕಾ ಹನಿಟ್ರ್ಯಾಪ್ ಆದಂತಾಗಿದೆ. ತೆಲಂಗಾಣದ ರೆಡ್ಡಿಪೇಟಾ ನಿವಾಸಿಯಾದ ರಾಜು ಅರಣ್ಯಕ್ಕೆ ಹೋಗಿ ಜೇನು ತೆಗೆಯಲು ಪ್ರಯತ್ನಿಸುತ್ತಿದ್ದಾಗ ಆತನ ಮೊಬೈಲ್ ಕಲ್ಲುಗಳ ಮಧ್ಯೆ ಬಿದ್ದುಹೋಯಿತು. ಅದನ್ನು ತೆಗೆಯಲೆಂದು ಬಾಗಿದಾಗ ಅವನೂ ಆಯತಪ್ಪಿ, ಬಿದ್ದಿದ್ದಾನೆ. ಗುಹೆಯ 15 ಅಡಿಗಳಷ್ಟು ಆಳದಲ್ಲಿರುವ ಆತನನ್ನು ಮೇಲೆತ್ತಲು ರಕ್ಷಣಾ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಜೆಸಿಬಿ ಯಂತ್ರದ ಮೂಲಕ ಬಂಡೆಗಳನ್ನು ಸರಿಸುವ ಪ್ರಯತ್ನ ನಡೆಯುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಸೋಮನಾಥ್ ‘ಕಳೆದ ಒಂದೂವರೆ ದಿನಗಳಿಂದಲೂ ರಾಜು ಗುಹೆಯಲ್ಲೇ ಇದ್ದಾನೆ. ಆತ ಮೊಬೈಲ್ ಎತ್ತಿಕೊಳ್ಳಲು ಹೋಗಿ ಬಿದ್ದ. ಮೊದಲು ಅವನ ಕುಟುಂಬದವರು ಅಲ್ಲಿಗೆ ತೆರಳಿ ರಾಜುನನ್ನು ಮೇಲೆತ್ತಲು ಯತ್ನಿಸಿದರು. ಆದರೆ ಸಾಧ್ಯವಾಗದೆ ಇದ್ದಾಗ ನಮಗೆ ಕರೆ ಮಾಡಿದರು. ಕೂಡಲೇ ಹೋಗಿ ಮೊದಲು ಸ್ವಲ್ಪ ತಿಂಡಿ, ಒಆರ್ಎಸ್ ಕೊಟ್ಟೆವು. ಧೈರ್ಯವನ್ನೂ ತುಂಬಿದ್ದೇವೆ. ಕಲ್ಲುರಾಶಿಗಳೇ ಇರುವುದರಿಂದ ರಕ್ಷಣಾ ಕಾರ್ಯವೂ ಸುಲಭವಲ್ಲ. ಆದರೂ ಆದಷ್ಟು ಬೇಗ ರಾಜುವನ್ನು ಹೊರಗೆ ಕರೆದುಕೊಂಡು ಬರುತ್ತೇವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral news | 10,000 ಉದ್ಯೋಗಿಗಳಿಗೆ ಮೂರು ದಿನದ ಡಿಸ್ನಿ ವರ್ಲ್ಡ್ ಪ್ರವಾಸ ಮಾಡಿಸಿದ ಬಾಸ್!