ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕ್ರಿಮಿನಲ್‌ಗಳ ಎನ್‌ಕೌಂಟರ್ ಜಾಸ್ತಿಯಾಗಿವೆ. ಹಾಗೆಯೇ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದವರು, ಅಪರಾಧ ಕೃತ್ಯದಲ್ಲಿ ತೊಡಗಿದವರ ಮನೆಗಳನ್ನು ಧ್ವಂಸಗೊಳಿಸುವುದು ಸೇರಿ ಹಲವು ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ, ಮಹಿಳಾ ಪೊಲೀಸ್ ಪೇದೆಯೊಬ್ಬರ ಹತ್ಯೆಯ ಪ್ರಮುಖ ಆರೋಪಿಯಾದ ಅನೀಶ್ ಖಾನ್ ಎಂಬುವನನ್ನು ಉತ್ತರ ಪ್ರದೇಶದ ಪೊಲೀಸರು ಎನ್‌ಕೌಂಟರ್ (UP Encounter) ಮಾಡಿದ್ದಾರೆ.
ಮಹಿಳಾ ಪೊಲೀಸ್ ಪೇದೆಯು ಕರ್ತವ್ಯ ನಿಮಿತ್ತವಾಗಿ ಸರಯೂ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಗಸ್ಟ್ 30ರಂದು ಅಯೋಧ್ಯೆಗೆ ತೆರಳುತ್ತಿದ್ದಾಗ ರೈಲಿನಲ್ಲಿ ಅನೀಶ್ ಖಾನ್ ಸೇರಿ ಹಲವರು ದಾಳಿ ಮಾಡಿದ್ದರು. ಮಾರಕಾಸ್ತ್ರಗಳಿಂದ ಮಹಿಳಾ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹಲ್ಲೆ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಪೇದೆಯು ಮೃತಪಟ್ಟಿದ್ದರು.
#UttarPradesh: Main accused in case of attack on lady police constable killed in police encounter in Saryu Express near Ayodhya. pic.twitter.com/Gd4fqpWv9s
— All India Radio News (@airnewsalerts) September 22, 2023
ಪ್ರಕರಣದಲ್ಲಿ ಪ್ರಮುಖ ಆರೋಪಿ ಅನೀಶ್ ಖಾನ್, ಅವನ ಇಬ್ಬರು ಸಹಚರರಾದ ಆಜಾದ್ ಹಾಗೂ ವಿಶಂಭರ್ ದಯಾಳ್ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಪೊಲೀಸರು ಕಾರ್ಯಾಚರಣೆ ನಡೆಸುವ ವೇಳೆ ಅನೀಶ್ ಖಾನ್ ಹತ್ಯೆಗೀಡಾಗಿದ್ದಾನೆ. ಎನ್‌ಕೌಂಟರ್ ವೇಳೆ ಮೂವರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ.
“ಅಯೋಧ್ಯೆ ಪೊಲೀಸರು ಹಾಗೂ ಉತ್ತರ ಪ್ರದೇಶ ಎಸ್‌ಟಿಎಫ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ವೇಳೆ ಛತ್ರಪರ ಪ್ರದೇಶದಲ್ಲಿ ಅನೀಶ್ ಖಾನ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಸಬ್ ಇನ್ಸ್‌ಪೆಕ್ಟರ್ ಪುರಕಲಂದರ್ ರತ್ನ ಶರ್ಮಾ ಸೇರಿ ಮೂವರು ಪೊಲೀಸರಿಗೆ ಗಾಯಗಳಾಗಿವೆ” ಎಂದು ಕಾನೂನು ಸುವ್ಯವಸ್ಥೆ ವಿಭಾಗದ ವಿಶೇಷ ಡಿಜಿ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Yogi Adityanath: ಯಮ ನಿಮಗಾಗಿ ಕಾಯುತ್ತಿರುತ್ತಾನೆ; ಕ್ರಿಮಿನಲ್‌ಗಳಿಗೆ ಯೋಗಿ ಖಡಕ್ ವಾರ್ನಿಂಗ್
ಎಚ್ಚರಿಕೆ ನೀಡಿದ್ದ ಯೋಗಿ
ಕೆಲ ದಿನಗಳ ಹಿಂದಷ್ಟೇ ಯೋಗಿ ಆದಿತ್ಯನಾಥ್ ಅವರು ಕ್ರಿಮಿನಲ್‌ಗಳಿಗೆ ಎಚ್ಚರಿಕೆ ಕೊಟ್ಟಿದ್ದರು. ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಬಾಲಕಿಯೊಬ್ಬಳನ್ನು ಚುಡಾಯಿಸಿದ ಇಬ್ಬರ ಕಾಲಿಗೆ ಗುಂಡು ಹಾರಿಸಿ, ಅವರನ್ನು ಬಂಧಿಸಿದ ಬಳಿಕ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದರು. “ರಾಜ್ಯದಲ್ಲಿ ಯಾರಾದರೂ ಈ ರೀತಿ ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಅವರಿಗೆ ಕಿರುಕುಳ ನೀಡುವುದು ಮಾಡಿದರೆ, ಅಂತಹವರಿಗೆ ಯಮರಾಜ ಕಾಯುತ್ತಿರುತ್ತಾನೆ. ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಸರ್ಕಾರ ರಾಜಿ ಆಗುವುದಿಲ್ಲ. ಕಠಿಣ ಕ್ರಮಗಳಿಂದಲೇ ಅಪರಾಧಿಗಳಿಗೆ ತಕ್ಕ ಪಾಠ ಕಲಿಸಲಾಗುತ್ತದೆ” ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.