Site icon Vistara News

Suresh Raina: ಸುರೇಶ್‌ ರೈನಾ ಸಂಬಂಧಿಕರ ಹತ್ಯೆಗೈದವನನ್ನು ಎನ್‌ಕೌಂಟರ್‌ ಮಾಡಿದ ಉ.ಪ್ರ ಪೊಲೀಸರು

Man Who Attacked Suresh Raina’s Relatives In 2020 Killed In Encounter By Uttar Pradesh Police

Man Who Attacked Suresh Raina’s Relatives In 2020 Killed In Encounter By Uttar Pradesh Police

ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯಾದ್ಯಂತ ಕ್ರಿಮಿನಲ್‌ಗಳನ್ನು ಮಟ್ಟಹಾಕಲಾಗುತ್ತಿದೆ. ಅದರಲ್ಲೂ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದವರು, ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡವರನ್ನು ಎನ್‌ಕೌಂಟರ್‌ಗಳ ಮೂಲಕವೇ ಮಟ್ಟ ಹಾಕಲಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, 2020ರಲ್ಲಿ ಕ್ರಿಕೆಟಿಗ ಸುರೇಶ್‌ ರೈನಾ (Suresh Raina) ಅವರ ಸಂಬಂಧಿಕರ ಮೇಲೆ ದಾಳಿ ನಡೆಸಿ, ಇಬ್ಬರನ್ನು ಹತ್ಯೆಗೈದಿದ್ದವನನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ.

ಸುರೇಶ್‌ ರೈನಾ ಅವರ ಇಬ್ಬರ ಸಂಬಂಧಿಕರನ್ನು ಹತ್ಯೆಗೈದ ರಶೀದ್‌ ಅಲಿಯಾ ಸಿಪೈಯಾ ತಂದೆ ಜಮಾಲುದ್ದೀನ್‌ ಎಂಬಾತನನ್ನು ಶನಿವಾರ (ಏಪ್ರಿಲ್‌ 1) ಸೋರಮ್‌-ಗೊಯ್ಲಾ ರಸ್ತೆಯಲ್ಲಿ ಎನ್‌ಕೌಂಟರ್‌ ಮಾಡಲಾಗಿದೆ. ಈತ ಮೊರಾದಾಬಾದ್‌ ಜಿಲ್ಲೆ ಪಿಪಲ್ಸಾನಾ ಪೊಲೀಸ್‌ ಠಾಣೆಯ ನಿವಾಸಿಯಾಗಿದ್ದು, ತಪಾಸಣೆಯ ವೇಳೆ ಪರಿಶೀಲನೆ ನಡೆಸಿದಾಗ ಪೊಲೀಸರ ಮೇಲೆಯೇ ಗುಂಡಿನ ದಾಳಿ ಆರಂಭಿಸಿದ್ದಾನೆ. ಇದೇ ವೇಳೆ ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ಗಾಯಗೊಂಡಿದ್ದ ಆತನನ್ನು ಸಿಎಚ್‌ಸಿ ಶಾಹ್‌ಪುರ್‌ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ಯಾವಾಗ ಸುರೇಶ್‌ ರೈನಾ ಸಂಬಂಧಿಕರ ಮೇಲೆ ದಾಳಿ?

ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ಸುರೇಶ್‌ ರೈನಾ ಚಿಕ್ಕಪ್ಪ ಅಶೋಕ್‌ ಕುಮಾರ್‌ ಹಾಗೂ ಅವರ ಪುತ್ರ ಕೌಶಲ್‌ ಸೇರಿ ಹಲವರ ಮೇಲೆ 2020ರ ಆಗಸ್ಟ್‌ 19ರಂದು ರಶೀದ್‌ ಸೇರಿ ಹಲವರು ಮಾರಕಾಸ್ತ್ರಗಳಿಂದ ನಡೆಸಿದ್ದರು. ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದ ಅಶೋಕ್‌ ಕುಮಾರ್‌ ಅವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಅವರ ಪುತ್ರ ಕೌಶಲ್‌ ಆಗಸ್ಟ್‌ 31ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇನ್ನು, ವೈಯಕ್ತಿಕ ಕಾರಣ ನೀಡಿ ಸುರೇಶ್‌ ರೈನಾ ಅವರು ಐಪಿಎಲ್‌ ಟೂರ್ನಿಯಿಂದ ಮಧ್ಯೆಯೇ ಹೊರಬಂದಿದ್ದರು. ಇನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಪಂಜಾಬ್‌ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ, ಕೇಸ್‌ ಸಾಲ್ವ್‌ ಆಗಿದೆ ಎಂದು ಹೇಳಿದ್ದರು. ಈಗ ಉತ್ತರ ಪ್ರದೇಶದ ಪೊಲೀಸರು ದಾಳಿ ಮಾಡಿದವನನ್ನೇ ಎನ್‌ಕೌಂಟರ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಆರು ವರ್ಷದಲ್ಲಿ 178 ಕ್ರಿಮಿನಲ್‌ಗಳ ಹತ್ಯೆ

ಯೋಗಿ ಆದಿತ್ಯನಾಥ್‌ ಅವರು ಮುಖ್ಯಮಂತ್ರಿಯಾದ ಬಳಿಕ ಅಂದರೆ, 2017ರಿಂದ ಇದುವರೆಗೆ ರಾಜ್ಯಾದ್ಯಂತ 178 ಕ್ರಿಮಿನಲ್‌ಗಳನ್ನು ಎನ್‌ಕೌಂಟರ್‌ ಮಾಡಲಾಗಿದೆ. ಕಳೆದ ಆರು ವರ್ಷದಲ್ಲಿ ಸರಾಸರಿ 13 ದಿನಕ್ಕೆ ಒಬ್ಬ ಕ್ರಿಮಿನಲ್‌ನನ್ನು ಹತ್ಯೆ ಮಾಡಲಾಗಿದೆ. 2017ರ ಮಾರ್ಚ್‌ನಿಂದ 2023ರ ಮಾರ್ಚ್‌ವರೆಗೆ 23,069 ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ. ಇನ್ನು ಎನ್‌ಕೌಂಟರ್‌ಗಳಲ್ಲಿ 4,911 ಜನರನ್ನು ಬಂಧಿಸಲಾಗಿದೆ. ಕ್ರಿಮಿನಲ್‌ಗಳ ಕುರಿತು ಮಾಹಿತಿ ನೀಡಿದರೆ ಸುಮಾರು 75 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾದ ಕ್ರಿಮಿನಲ್‌ಗಳನ್ನು ಹತ್ಯೆ ಮಾಡಲಾಗಿದೆ ಎಂಬುದಾಗಿ ಪೊಲೀಸರೇ ತಿಳಿಸಿದ್ದಾರೆ.

ಇದನ್ನೂ ಓದಿ: Prayagraj Encounter: ಉಮೇಶ್‌ ಪಾಲ್‌ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿಯ ಎನ್‌ಕೌಂಟರ್‌

Exit mobile version