ಪಾಕಿಸ್ತಾನ ಗುಪ್ತಚರ ದಳ ಐಎಸ್ಐ (Pakistan Inter Services Intelligence (ISI)ಜತೆ ಸಂಪರ್ಕ ಹೊಂದಿದ್ದ ಯುವಕನೊಬ್ಬನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ATS) ಅರೆಸ್ಟ್ ಮಾಡಿದೆ. ಆರೋಪಿ ಹೆಸರು ಮೊಹಮ್ಮದ್ ರಯೀಸ್ ಎಂದಾಗಿದ್ದು, ಈತ ಐಎಸ್ಐಗಾಗಿ ಕೆಲಸ ಮಾಡುತ್ತಿದ್ದ. ಭಾರತದ ಸೇನಾ ಸಂಸ್ಥೆ (Military Establishments)ಗಳ ಬಗ್ಗೆ ಐಎಸ್ಐಗೆ ಪ್ರಮುಖ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದ ಎಂದು ಉತ್ತರ ಪ್ರದೇಶ ಎಟಿಎಸ್ ತಿಳಿಸಿದೆ.
ಮೊಹಮ್ಮದ್ ರಯೀಸ್ ಉತ್ತರ ಪ್ರದೇಶದ ಗೊಂಡಾದ ತರಬ್ಗಂಜ್ ಏರಿಯಾದ ನಿವಾಸಿ. ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಮಾನ್ ಎಂಬಾತನ ಸಂಪರ್ಕಕ್ಕೆ ಬಂದ ನಂತರ ಅವನು ಐಎಸ್ಐ ಗೂಢಾಚಾರನಾಗಿ ಬದಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಹಮ್ಮದ್ ರಯೀಸ್, ಎಟಿಎಸ್ ಎದುರು ಹೇಳಿಕೆ ಕೊಡುವಾಗ ಅರ್ಮಾನ್ ಹೆಸರನ್ನು ಹೇಳಿದ್ದಾನೆ. ಆತನೇ ನನ್ನ ಸಂಪರ್ಕಕ್ಕೆ ಬಂದ. ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ ಎಂಬ ವಿಷಯವನ್ನು ನನ್ನ ತಲೆಗೆ ತುಂಬಿದ. ನಾನೂ ಅವನ ಮಾತನನ್ನು ನಂಬಿ, ಐಎಸ್ಐಗಾಗಿ ಕೆಲಸ ಮಾಡಲು ಶುರು ಮಾಡಿದೆ ಎಂದು ರಯೀಸ್ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: Pakistan Airlines : ಬಾಕಿ ಕೊಡದ ಪಾಕಿಸ್ತಾನ ಏರ್‌ಲೈನ್ಸ್‌ಗೆ ಸೌದಿ ಅರೇಬಿಯಾ ಕೊನೆಯ ಎಚ್ಚರಿಕೆ
‘ಅರ್ಮಾನ್ ಪರಿಚಯ ಆಗಿ ಕೆಲವು ದಿನಗಳಲ್ಲಿ ‘ನಾನು ಕೆಲಸಕ್ಕೆಂದು ಸೌದಿ ಅರೇಬಿಯಾಕ್ಕೆ ಹೋಗುತ್ತಿದ್ದೇನೆ. ನಾನು ನಿನ್ನ ಫೋನ್ ನಂಬರ್ನ್ನು ಪಾಕಿಸ್ತಾನದ ಒಬ್ಬ ವ್ಯಕ್ತಿಗೆ ಕೊಟ್ಟಿದ್ದೇನೆ. ಅವನು ಹೇಳಿದಂತೆ ಕೇಳು. ಭಾರತದ ಮಿಲಿಟರಿ ಬಗ್ಗೆ ಅವನಿಗೆ ಮಾಹಿತಿ ಕೊಡು. ಭಾರತದ ವಿರುದ್ಧ ಗೂಢಾಚಾರಿಕೆ ಮಾಡಿದರೆ ನಿನಗೆ ಕೈತುಂಬ ಹಣವೂ ಸಿಗುತ್ತದೆ’ ಎಂದು ಹೇಳಿದ. ನಾನು ಅವನು ಹೇಳಿದಂತೆ ನಡೆದುಕೊಂಡೆ ಎಂದೂ ರಯೀಸ್ ತಿಳಿಸಿದ್ದಾನೆ.
ರಯೀಸ್ಗೆ ಮೊದಲ ಬಾರಿಗೆ ಪಾಕಿಸ್ತಾನದ ವ್ಯಕ್ತಿ ಹುಸೇನ್ ಎಂಬಾತನಿಂದ ಕರೆ ಬಂದಿದ್ದು 2022ರಲ್ಲಿ. ಹುಸೇನ್ ಪಾಕಿಸ್ತಾನ ಗುಪ್ತಚರ ದಳದ ಗೂಢಚಾರಿ. ರಯೀಸ್ ಭಾರತದ ಸೇನಾ ನೆಲೆಗಳು, ಸಂಸ್ಥೆಗಳ ಬಗ್ಗೆ ಹುಸೇನ್ಗೆ ಹೇಳುತ್ತಿದ್ದ. ಸೇನೆಗಳ ಬಗ್ಗೆ ವಿಷಯ ಸಂಗ್ರಹ ಮಾಡಲು ರಯೀಸ್ ಹಲವು ಕಸರತ್ತು ಮಾಡಿದ್ದಾನೆ. ತನ್ನ ಸ್ನೇಹಿತರನ್ನು, ಬೇರೆ ಕೆಲವರನ್ನು ಬಳಸಿಕೊಂಡಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದು, ಸದ್ಯ ಈತನ ಬಗ್ಗೆ ಸಮಗ್ರ ತನಿಖೆ ಶುರುವಾಗಿದೆ. ಇವನ ಸಂಬಂಧಿಕರು, ಸ್ನೇಹಿತರ ಮೇಲೆ ಕೂಡ ಎಟಿಎಸ್ ಕಣ್ಗಾವಲು ಇದೆ.