Site icon Vistara News

Shraddha Murder Case| ತಾನೊಬ್ಬ ಮುಸ್ಲಿಂ ಎಂದು ಹೇಳಿಕೊಂಡು ಅಫ್ತಾಬ್​ ಕೃತ್ಯವನ್ನು ಸಮರ್ಥಿಸಿದ್ದ ಹಿಂದು ಯುವಕ ಬಂಧನ

Man Who Justified Aaftab about Shraddha Walkar Murder arrsted

ನವ ದೆಹಲಿ: ಲಿವ್​ ಇನ್​ ಸಂಗಾತಿ ಶ್ರದ್ಧಾ ವಾಳ್ಕರ್​​ಳನ್ನು ಹತ್ಯೆ ಮಾಡಿ, 35 ತುಂಡುಗಳಾಗಿ ಕತ್ತರಿಸಿ ಬಿಸಾಕಿದ್ದ ಅಫ್ತಾಬ್​ ಪೂನಾವಾಲಾ ಕೃತ್ಯವನ್ನು ಬೆಂಬಲಿಸಿ ಮಾತನಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅರೆಸ್ಟ್ ಆದ ಹುಡುಗ ವಾಸ್ತವದಲ್ಲಿ ಹಿಂದು. ಉತ್ತರ ಪ್ರದೇಶದ ಬುಲಂದ್​ಶಹರ್​​ನ ಸಿಕಂದರಾಬಾದ್​ ನಿವಾಸಿ. ಅವನ ಹೆಸರು ವಿಕಾಸ್ ಕುಮಾರ್​. ಆದರೆ ಶ್ರದ್ಧಾ ವಾಳ್ಕರ್​ ಹತ್ಯೆ ಬಳಿಕ ಮಾಧ್ಯಮವೊಂದರ ಪ್ರತಿನಿಧಿ ಘಟನೆ ಬಗ್ಗೆ ಹಲವು ಜನರನ್ನು ಮಾತನಾಡಿಸಿದ್ದರು. ಆಗ ಈ ಯುವಕನೂ ಮಾಧ್ಯಮಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದ. ತಾನೊಬ್ಬ ಮುಸ್ಲಿಂ, ತನ್ನ ಹೆಸರು ರಶೀದ್​ ಖಾನ್​ ಎಂದು ಹೇಳಿಕೊಂಡು, ‘ಅಫ್ತಾಬ್​ ಮಾಡಿದ್ದು ಸರಿಯಿದೆ’ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದ.

ಶ್ರದ್ಧಾ ವಾಳ್ಕರ್​ ಹತ್ಯೆ ಬಗ್ಗೆ ಮಾಧ್ಯಮವೊಂದರ ಪ್ರತಿನಿಧಿ ಈತನನ್ನು ಪ್ರಶ್ನಿಸಿದಾಗ ‘ಜನರು ಅತ್ಯಂತ ಕೋಪ ಬಂದಾಗ ಇಂಥ ಘಟನೆಗಳು ನಡೆಯುತ್ತವೆ. ಮೃತದೇಹವನ್ನು 35 ಅಲ್ಲ, 36 ತುಂಡುಗಳಾಗಿ ಕತ್ತರಿಸಿರಬಹುದು ನೋಡಿ’ ಎಂದು ವ್ಯಂಗ್ಯ ಮಾಡಿದ್ದ ವಿಕಾಸ್​ ಕುಮಾರ್. ನೀವೂ ಇಂಥ ಕೆಲಸಗಳನ್ನು ಮಾಡಬಹುದು ಎನ್ನಿಸುತ್ತದೆಯೇ ಎಂದು ವರದಿಗಾರ್ತಿ ಪ್ರಶ್ನಿಸಿದಾಗ ‘ಸಿಟ್ಟಿನಲ್ಲಿದ್ದಾಗ ಏನು ಮಾಡುತ್ತೇವೆ ಗೊತ್ತಾಗುವುದಿಲ್ಲ. ಇದೆಲ್ಲ ದೊಡ್ಡ ವಿಷಯವೇ ಅಲ್ಲ’ ಎಂದು ಹೇಳಿದ್ದ. ಆದರೆ ಅಂದು ತನ್ನ ನಿಜವಾದ ಹೆಸರನ್ನು ಮುಚ್ಚಿಟ್ಟಿದ್ದ. ನಿಮ್ಮ ಹೆಸರೇನು ಎಂದು ಕೇಳಿದ್ದಕ್ಕೆ ರಶೀದ್ ಖಾನ್ ಎಂದಿದ್ದ.

ವಿಕಾಸ್​ ಕ್ರಿಮಿನಲ್​ ಇತಿಹಾಸ ಹೊಂದಿದ್ದಾನೆ. ಈತ ವಿವಿಧ ಕಳ್ಳತನದಲ್ಲಿ ಭಾಗಿಯಾಗಿರುವ, ಕಾನೂನು ಬಾಹಿರವಾಗಿ ಶಸ್ತ್ರಗಳನ್ನು ಹೊಂದಿರುವ ಬಗ್ಗೆ ಬುಲಂದ್​ಶಹರ್​ ಮತ್ತು ನೊಯ್ಡಾ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಬುಲಂದ್​ಶಹರ್​ ಹಿರಿಯ ಪೊಲೀಸ್ ಅಧಿಕಾರಿ ಶ್ಲೋಕ್​ ಕುಮಾರ್​ ಹೇಳಿದ್ದಾರೆ. ಈತ ಅರೆಸ್ಟ್ ಆಗುತ್ತಿದ್ದಂತೆ ತನ್ನ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾನೆ. ‘ಶ್ರದ್ಧಾಳನ್ನು ಅಫ್ತಾಬ್​ ಹತ್ಯೆ ಮಾಡಿದ ವಿಷಯ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂದುಕೊಂಡಿರಲಿಲ್ಲ. ಈ ಕೊಲೆಯ ಗಂಭೀರತೆ ನನಗೆ ಅರ್ಥವಾಗಿರಲಿಲ್ಲ. ಹಾಗಾಗಿ ನಾನು ಅಂಥ ಮಾತುಗಳನ್ನಾಡಿದ್ದೆ. ತಪ್ಪಾಯಿತು ನನ್ನಿಂದ. ನಾನು ಕೊಲೆಯಾಗಬಹುದು ಎಂಬ ಭಯವೂ ನನ್ನನ್ನು ಕಾಡುತ್ತಿದೆ’ ಎಂದು ಹೇಳಿದ್ದಾನೆ ಎಂದೂ ಪೊಲೀಸ್​ ಅಧಿಕಾರಿ ಹೇಳಿದ್ದಾರೆ.

2020ರಿಂದಲೂ ಮಹಾರಾಷ್ಟ್ರದಲ್ಲೇ ಇದ್ದ ಶ್ರದ್ಧಾ ವಾಳ್ಕರ್​ ಮತ್ತು ಅಫ್ತಾಬ್​ ಈ ವರ್ಷ ಏಪ್ರಿಲ್​​​​ನಲ್ಲಿ ದೆಹಲಿಯ ಅಪಾರ್ಟ್​​ಮೆಂಟ್​ಗೆ ಹೋಗಿದ್ದರು. ಅಲ್ಲಿ ಹೋಗಿ ಒಂದು ತಿಂಗಳಲ್ಲಿ, ಅಂದರೆ ಮೇ ದಲ್ಲಿ ಅಫ್ತಾಬ್​ ಪೂನಾವಾಲಾ ಶ್ರದ್ಧಾಳನ್ನು ಹತ್ಯೆಗೈದಿದ್ದ. ಬಳಿಕ ಆಕೆಯ ಶವವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ಮೆಹ್ರೌಲಿ ಅರಣ್ಯದಲ್ಲಿ ಆ ಭಾಗಗಳನ್ನು ಎಸೆದಿದ್ದ. ಆ ಪ್ರಕರಣವನ್ನೀಗ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಅಫ್ತಾಬ್​ ಬಂಧಿತನಾಗಿದ್ದಾನೆ.

ಇದನ್ನೂ ಓದಿ: Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

Exit mobile version