ಗ್ವಾಲಿಯರ್: ಇಬ್ಬರು ಪತ್ನಿಯರನ್ನು ಹೊಂದುವುದು ಕಾನೂನು ಪ್ರಕಾರ ತಪ್ಪಾಗಿದ್ದರೂ, ಕೆಲವರು ಎರಡು-ಮೂರು ಮದುವೆಯನ್ನು ಆಗಿಬಿಡುತ್ತಾರೆ. ಹಾಗೇ, ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಯುವಕನೊಬ್ಬ ಇಬ್ಬರು ಯುವತಿಯರನ್ನು ಮದುವೆಯಾಗಿ, ಈಗ ಆ ಪತ್ನಿಯರಿಬ್ಬರ ಜತೆ ಕಳೆಯಲು ಶೆಡ್ಯೂಲ್ ಹಾಕಿಕೊಂಡಿದ್ದಾನೆ..! ಒಬ್ಬಳಿಗೆ ಮೂರು ದಿನ, ಇನ್ನೊಬ್ಬಳಿಗೆ ಮೂರು ದಿನ ಎಂದು ಆ ಪತಿಯನ್ನು ಹಂಚಿಬಿಡಲಾಗಿದೆ..
ಮಧ್ಯಪ್ರದೇಶದ ಈ ವ್ಯಕ್ತಿ ಇಂಜಿನಿಯರ್ ಆಗಿದ್ದು, ಗುರುಗಾಂವ್ನಲ್ಲಿ ಕೆಲಸ ಮಾಡುತ್ತಿದ್ದ. 2018ರಲ್ಲಿ ಸೀಮಾ ಎಂಬಾಕೆಯನ್ನು ಮದುವೆಯಾಗಿ, ಅವರಿಗೆ ಒಬ್ಬ ಗಂಡುಮಗ ಕೂಡ ಹುಟ್ಟಿದ. 2020ರಲ್ಲಿ ಕೊರೊನಾ ಶುರುವಾಗಿ ಲಾಕ್ಡೌನ್ ಆದಾಗ ಸೀಮಾ ತನ್ನ ಮಗುವೊಂದಿಗೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲೇ ಉಳಿದರು. ಈತ ಒಬ್ಬನೇ ಹರ್ಯಾಣದಲ್ಲಿ ಉಳಿದುಕೊಂಡು, ಕೆಲಸ ಮುಂದುವರಿಸಿದ್ದ.
ಈ ಮಧ್ಯೆ ಆ ಇಂಜಿನಿಯರ್ಗೆ ತನ್ನ ಸಹೋದ್ಯೋಗಿ ಯುವತಿಯೊಂದಿಗೆ ಸಂಬಂಧ ಬೆಳೆಯಿತು. ಅವನಿಗೆ ಮದುವೆಯಾಗಿದೆ ಎಂದು ಗೊತ್ತಿದ್ದರೂ ಯುವತಿ ಆತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಬಳಿಕ ಆಕೆಯನ್ನೂ ಆತ ಮದುವೆಯಾದ. ಇವರಿಗೆ ಹೆಣ್ಣುಮಗು ಹುಟ್ಟಿತು.
ಇದನ್ನೂ ಓದಿ: RSS on Marriage : ಮದುವೆಯೆಂದರೆ ಸಂಸ್ಕಾರ, ಎಂಜಾಯ್ ಮಾಡುವ ಸಾಧನವಲ್ಲ; ದತ್ತಾತ್ರೆಯ ಹೊಸಬಾಳೆ
ಇತ್ತ ಸೀಮಾಳಿಗೆ ತನ್ನ ಪತಿ ಇನ್ನೊಂದು ಮದುವೆಯಾಗಿದ್ದು ಗೊತ್ತಾಗುತ್ತಿದ್ದಂತೆ ಆಕೆ ಕೋಪಗೊಂಡಳು. ಸೀದಾ ಪತಿಯಿದ್ದಲ್ಲೇ ಹೋಗಿ ಜಗಳ ಮಾಡಿದಳು. ವಾಪಸ್ ಗ್ವಾಲಿಯರ್ಗೆ ಬಂದು ಪತಿ ವಿರುದ್ಧ ಕೇಸ್ ದಾಖಲಿಸಿದರು. ತನ್ನ ಮಗನಿಗೆ ಪತಿಯಿಂದ ಹಣಕಾಸಿನ ನೆರವು ಬೇಕು ಎಂದೂ ಹೇಳಿದರು.
ಈ ಕೇಸ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ದಂಪತಿಗೆ ಕೌನ್ಸಿಲಿಂಗ್ ಮಾಡಿಸಲಾಗಿದೆ. ಕೌನ್ಸಿಲರ್ ಹರೀಶ್ ದೇವನ್ ಎಂಬುವರು ಸೀಮಾ ಮತ್ತು ಆಕೆಯ ಪತಿಯನ್ನು ಕೂರಿಸಿಕೊಂಡು ಸಮಾಧಾನವಾಗಿ ಮಾತನಾಡಿದ್ದಾರೆ. ಅಂತಿಮವಾಗಿ ದಂಪತಿ ಒಂದು ಇತ್ಯರ್ಥಕ್ಕೆ ಬಂದಿದ್ದಾರೆ. ಅದರ ಅನ್ವಯ ಸೀಮಾ ಮತ್ತು ಮಗನೊಂದಿಗೆ ಆತ ಮೂರು ದಿನ ಕಳೆಯಬೇಕು, ಮತ್ತೊಬ್ಬಳು ಪತ್ನಿ ಮತ್ತು ಮಗಳೊಂದಿಗೆ ಮೂರು ದಿನ ಕಳೆಯಬೇಕು. ಒಂದು ದಿನ ಫ್ರೀ…!