ಹೈದ್ರಾಬಾದ್, ತೆಲಂಗಾಣ: 24 ರಾಜ್ಯಗಳು, 8 ಮೆಟ್ರೋ ನಗರಗಳ ಸುಮಾರು 70 ಕೋಟಿ ಜನರು ಹಾಗೂ ಸಂಘ ಸಂಸ್ಥೆಗಳ ಖಾಸಗಿ ಮತ್ತು ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವುದಾಗಿ ತೆಲಂಗಾಣದ ಸೈಬರ್‌ಬಾದ್ ಪೊಲೀಸರು ಹೇಳಿದ್ದಾರೆ(Cyberabad Police). ಬಂಧಿತ ವ್ಯಕ್ತಿಯ ಹೆಸರು ವಿನಯ್ ಭಾರದ್ವಾಜ್ ಎಂದು ತಿಳಿದು ಬಂದಿದೆ.
ಆರೋಪಿ ವಿನಯ್ ಭಾರದ್ವಾಜ್ ಎಜು-ಟೆಕ್ ಸಂಸ್ಥೆಗಳ ವಿದ್ಯಾರ್ಥಿಗಳ ಮಾಹಿತಿಯನ್ನು ಹೊಂದಿದ್ದಾನೆ. ಜಿಎಸ್‌ಟಿ, ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳು, ಸೋಷಿಯಲ್ ಮೀಡಿಯಾ, ಫಿನ್-ಟೆಕ್ ಕಂಪನಿಗಳು ಪ್ರಮುಖ ಇ ಕಾಮರ್ಸ್ ಪೋರ್ಟಲ್‌ಗಳಂತಹ ಪ್ರಮುಖ ಸಂಸ್ಥೆಗಳ ಗ್ರಾಹಕರ ಡೇಟಾವನ್ನು ಕದ್ದಿದ್ದಾನೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಂಧಿತ ಆರೋಪಿಯಿ 104 ಕೆಟಗರಿಯಲ್ಲಿ ನಿರ್ವಹಿಸಲಾದ ಸುಮಾರು 66.9 ಕೋಟಿ ಜನರು ಮತ್ತು ವಿವಿಧ ಸಂಘ ಸಂಸ್ಥೆಗಳ ವೈಯಕ್ತಿ ಮತ್ತು ಖಾಸಗಿ ಮಾಹಿತಿಯನ್ನು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯ ಬಳಿ ಮಹತ್ವದ ಮಾಹಿತಿ ಇರುವುದು ಪತ್ತೆಯಾಗಿದೆ. ಈ ಪೈಕಿ ರಕ್ಷಣಾ ಸಿಬ್ಬಂದಿ, ಸರ್ಕಾರಿ ನೌಕರರು, ಪ್ಯಾನ್ ಕಾರ್ಡ್ ಹೊಂದಿರುವವರು, 9, 10, 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಡೇಟಾ, ಹಿರಿಯ ನಾಗರಿಕರು, ದೆಹಲಿ ವಿದ್ಯುತ್ ಗ್ರಾಹಕರು, ಡಿ-ಮ್ಯಾಟ್ ಖಾತೆದಾರರು, ಮೊಬೈಲ್ ಸಂಖ್ಯೆಗಳು ಸೇರಿವೆ. ವಿವಿಧ ವ್ಯಕ್ತಿಗಳು, ನೀಟ್ ವಿದ್ಯಾರ್ಥಿಗಳು, ವಿಐಪಿಗಳು, ವಿಮಾದಾರರು, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಮಾಹಿತಿಯನ್ನು ಈತ ಮೂರನೇ ಪಾರ್ಟಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದೇಶವ್ಯಾಪಿ ಸೆಕ್ಸ್ ರ್‍ಯಾಕೆಟ್ ಪತ್ತೆ, 14,000 ಹೆಣ್ಣುಮಕ್ಕಳ ರಕ್ಷಣೆ, ಬೆಂಗಳೂರಿನಲ್ಲೂ ಇತ್ತು ಇದರ ಜಾಲ!
ಬಂಧಿತ ಆರೋಪಿ ವಿನಯ್ ಭಾರದ್ವಾಜ್, ಹರ್ಯಾಣದ ಫರಿದಾಬಾದ್‌ನಿಂದ InspireWebz ಜಾಲತಾಣದ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದ. ಕ್ಲೌಡ್ ಡ್ರೈವ್ ಲಿಂಕ್ಸ್ ಮೂಲಕ ಈತ ಜನರ ಮಾಹಿತಿಯನ್ನು ತನ್ನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ ಎರಡು ಮೊಬೈಲ್ ಫೋನ್, ಎರಡು ಲ್ಯಾಪ್‌ಟಾಪ್, ಸರ್ಕಾರ, ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುವ 135 ವರ್ಗಗಳ ಡೇಟಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
250 ಕೋಟಿ ಕ್ರೋಮ್ ಬಳಕೆದಾರರ ಡೇಟಾ ಕಳವು
ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಸೈಬರ್ ಕ್ರೈಂ ತಡೆಗೆ ಎಷ್ಟೇ ನಿಯಮ ರೂಪಿಸಿದರೂ, ನಿಗಾ ಇರಿಸಿದರೂ ಹ್ಯಾಕಿಂಗ್ ಮಾತ್ರ ನಿಲ್ಲುತ್ತಿಲ್ಲ. ಹಾಗಾಗಿ, ಇಂದು ಯಾರ ವೈಯಕ್ತಿಕ ಮಾಹಿತಿಯೂ ಸುರಕ್ಷಿತವಲ್ಲ ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಗೂಗಲ್ ಕ್ರೋಮ್ (Google Chrome) ವೆಬ್ ಬ್ರೌಸರ್‌ನ 250 ಕೋಟಿಗೂ ಅಧಿಕ ಜನರ ಮಾಹಿತಿ ಕಳ್ಳತನವಾಗಿದೆ (Google Chrome Data Breach) ಎಂದು ಕಳೆದ ತಿಂಗಳು ಮಾಹಿತಿ ಹೊರಬಿದ್ದಿತ್ತು.
“ಗೂಗಲ್ ಕ್ರೋಮ್ ಹಾಗೂ ಕ್ರೋಮಿಯಮ್ ಬ್ರೌಸರ್‌ಗಳ 250 ಕೋಟಿಗೂ ಅಧಿಕ ಬಳಕೆದಾರರ ಮಾಹಿತಿಯು ಅಪಾಯದಲ್ಲಿದೆ. ಬಳಕೆದಾರರ ಸೂಕ್ಷ್ಮ ಮಾಹಿತಿ, ದಾಖಲೆ, ಕ್ರಿಪ್ಟೋ ವ್ಯಾಲೆಟ್‌ಗಳು ಹಾಗೂ ಕ್ಲೌಡ್ ಪ್ರೊವೈಡರ್ ಕ್ರೆಡೆನ್ಶಿಯಲ್‌ಗಳು ಸೋರಿಕೆಯಾಗಿರುವ ಸಾಧ್ಯತೆ ಇದೆ” ಎಂದು ಸೈಬರ್ ಸೆಕ್ಯುರಿಟಿ ಸಂಸ್ಥೆ ‘ಇಂಪರ್ವಾ ರೆಡ್’ (Imperva Red) ಮಾಹಿತಿ ನೀಡಿದೆ. ಇದು ಗೂಗಲ್ ಕ್ರೋಮ್ ಇತಿಹಾಸದಲ್ಲೇ ಬೃಹತ್ ಡೇಟಾ ಸೋರಿಕೆ ಪ್ರಕರಣ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮೊಬೈಲ್, ಕಂಪ್ಯೂಟರ್ ಸುರಕ್ಷತೆ ಹೇಗೆ?
ಹ್ಯಾಕರ್‌ಗಳು ಸಿಮ್‌ಲಿಂಕ್ (SymLink Or Symbolic Link) ಮೂಲಕ ಬಳಕೆದಾರರ ಮಾಹಿತಿಯನ್ನು ಕದ್ದಿದ್ದಾರೆ ಎಂದು ಕಂಪನಿ ತಿಳಿಸಿದೆ. ಕ್ರೋಮಿಯಮ್ ವರ್ಷನ್ 107 ಹಾಗೂ ಕ್ರೋಮ್ ವರ್ಷನ್ 108ಅನ್ನು ಕಳೆದ ವರ್ಷ ಬಿಡುಗಡೆ ಮಾಡಿದ್ದು, ಇವುಗಳನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡುವ ಮೂಲಕ ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎಂದು ಇಂಪರ್ವಾ ರೆಡ್ ಸಲಹೆ ನೀಡಿದೆ.