ಲಖನೌ: ರಾಜಕಾರಣಿಗಳು ಕೆಲವೊಮ್ಮೆ ನೀಡುವ ಹೇಳಿಕೆಗಳು, ಮಾಡುವ ಉಲ್ಲೇಖಗಳು ಎಷ್ಟರಮಟ್ಟಿಗೆ ವೈಜ್ಞಾನಿಕವಾಗಿ ಇರುತ್ತವೆ, ಎಷ್ಟರಮಟ್ಟಿಗೆ ವಾಸ್ತವಕ್ಕೆ ಹತ್ತಿರವಾಗಿರುತ್ತವೆ ಎಂಬುದರ ಬಗ್ಗೆ ನಿಖರವಾಗಿ ಹೇಳಲು ಆಗುವುದಿಲ್ಲ. ಆದರೆ, ಕೆಲವೊಮ್ಮೆ ಅವರು ನೀಡುವ ಹೇಳಿಕೆಗಳು ಹಾಸ್ಯಾಸ್ಪದವಾಗಿಯೂ, ವಿವಾದಾತ್ಮಕವಾಗಿಯೂ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಬಿಜೆಪಿ ಸಂಸದೆ ಮನೇಕಾ ಗಾಂಧಿ (Maneka Gandhi) ಅವರು ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. “ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನು ಬಳಸಿದರೆ ಹೆಣ್ಣುಮಕ್ಕಳ ಸೌಂದರ್ಯ ಹೆಚ್ಚುತ್ತದೆ” ಎಂದು ಮನೇಕಾ ಹೇಳಿರುವ ವಿಡಿಯೊ ಈಗ ವೈರಲ್ ಆಗಿದೆ.
ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಈಜಿಪ್ತ್ ರಾಣಿ ಕ್ಲಿಯೋಪಾತ್ರ ಅವರು ತುಂಬ ಖ್ಯಾತರಾದ ರಾಣಿಯಾಗಿದ್ದರು. ಅವರು ಕತ್ತೆಯ ಹಾಲಿನ ಸಾಬೂನನ್ನು ಬಳಸುತ್ತಿದ್ದರು. ಹಾಗಾಗಿ, ಹೆಣ್ಣುಮಕ್ಕಳು ಕತ್ತೆಯ ಹಾಲಿನ ಸಾಬೂನು ಬಳಸಿದರೆ, ಅವರು ಯಾವಾಗಲೂ ಸೌಂದರ್ಯವತಿಯಾಗಿರುತ್ತಾರೆ. ದೆಹಲಿಯಲ್ಲಿ ಕತ್ತೆ ಹಾಲಿನಿಂದ ತಯಾರಿಸಿದ ಒಂದು ಸಾಬೂನಿಗೆ 500 ರೂಪಾಯಿ ಆಗುತ್ತದೆ. ಹಾಗಾಗಿ, ನಾವೇಕೆ ಆಡು ಹಾಗೂ ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನು ಉತ್ಪಾದಿಸಬಾರದು” ಎಂದು ಕೂಡ ಪ್ರಶ್ನಿಸಿದ್ದಾರೆ.
ಮನೇಕಾ ಹೇಳಿಕೆಯ ವಿಡಿಯೊ ಇಲ್ಲಿದೆ
ಕತ್ತೆಗಳ ಸಂತತಿ ಬಗ್ಗೆಯೂ ಸಂಸದೆ ಉಲ್ಲೇಖಿಸಿದರು. “ಈಗ ಯಾರಾದರೂ ಹೆಚ್ಚಿನ ಪ್ರಮಾಣದಲ್ಲಿ ಕತ್ತೆಗಳನ್ನು ನೋಡುತ್ತಿದ್ದೀರಾ? ಕತ್ತೆಗಳ ಸಂಖ್ಯೆಯು ದಿನೇದಿನೆ ಕುಸಿಯುತ್ತಿದೆ. ಅಗಸರು ಕೂಡ ಕತ್ತೆಗಳ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಲಡಾಕ್‌ನಲ್ಲಿ ಮಾತ್ರ ಕತ್ತೆಗಳನ್ನು ಬಳಸುವ ಜನರಿದ್ದಾರೆ. ಅವುಗಳ ಸಂಖ್ಯೆ ಅಲ್ಲಿ ಹೆಚ್ಚಿದೆ. ಲಡಾಕ್ ಜನರು ಕತ್ತೆಗಳ ಹಾಲಿನಿಂದ ಸಾಬೂನು ತಯಾರಿಸುತ್ತಾರೆ. ಸಾಬೂನಿನಿಂದ ಹೆಣ್ಣುಮಕ್ಕಳಿಗೆ ಅನುಕೂಲವಿದೆ” ಎಂದು ಹೇಳಿದರು.
ಗೋವಿನ ಬೆರಣಿ ಬಳಕೆ ಹೆಚ್ಚಾಗಲಿ
ಅಗತ್ಯ ವಸ್ತುಗಳ ಬೆಲೆಯೇರಿಕೆ ಕುರಿತು ಕೂಡ ಅವರು ಪ್ರಸ್ತಾಪಿಸಿದರು. “ಕಟ್ಟಿಗೆ ಬೆಲೆಯೂ ಇತ್ತೀಚೆಗೆ ಏರಿಕೆಯಾಗಿದೆ. ಅದರಲ್ಲೂ, ಅಂತ್ಯಸಂಸ್ಕಾರದ ವೇಳೆ ಕಟ್ಟಿಗೆಗೇ 15-20 ಸಾವಿರ ರೂಪಾಯಿ ಬೇಕು. ಇದರಿಂದ ಯಾರಾದರೂ ಸತ್ತರೆ ಅವರ ಕುಟುಂಬ ಇನ್ನಷ್ಟು ಬಡತನಕ್ಕೆ ಸಿಲುಕುತ್ತದೆ. ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತದೆ. ಹಾಗಾಗಿ, ಶವಸಂಸ್ಕಾರದ ವೇಳೆ ಕಟ್ಟಿಗೆಯ ಬದಲು ಗೋವಿನ ಸಗಣಿಯಿಂದ ಮಾಡಿದ ಬೆರಣಿ (ಕುರುಳು)ಯನ್ನು ಬಳಸಬೇಕು. ಇದಕ್ಕೆ ಕೇವಲ 1500-2000 ರೂಪಾಯಿ ಖರ್ಚಾಗುತ್ತದೆ” ಎಂದು ತಿಳಿಸಿದರು.
ಪ್ರಾಣಿಗಳ ಸಾಕಣೆಗೆ ಮನೇಕಾ ವಿರೋಧ
ಹಸು, ಎಮ್ಮೆ, ಆಡು ಸೇರಿ ಹಲವು ಪ್ರಾಣಿಗಳ ಸಾಕಣೆಯನ್ನು ಮನೇಕಾ ಗಾಂಧಿ ವಿರೋಧಿಸಿದ್ದಾರೆ. “ಗೋವು, ಎಮ್ಮೆ, ಆಡುಗಳು ಸೇರಿ ಹಲವು ಪ್ರಾಣಿಗಳನ್ನು ಸಾಕುವುದರಿಂದ ಇದುವರೆಗೆ ಯಾರೂ ಶ್ರೀಮಂತರಾಗಿಲ್ಲ. ಅವುಗಳು ಅನಾರೋಗ್ಯಕ್ಕೀಡಾದರೆ ದುಡ್ಡು ಖರ್ಚಾಗುತ್ತದೆ. ಅವುಗಳ ಪಾಲನೆಗೆ ಹಲವು ವರ್ಷ ಬೇಕಾಗುತ್ತದೆ. ಹಾಗೊಂದು ವೇಳೆ ರಾತ್ರೋ ರಾತ್ರಿ ಅವು ಮೃತಪಟ್ಟರೆ ನಷ್ಟವಾಗುತ್ತದೆ. ಹಾಗಾಗಿ, ಪ್ರಾಣಿಗಳನ್ನು ಸಾಕಿ ಯಾರೂ ಹೆಚ್ಚಿನ ದುಡು ಗಳಿಸಲು ಆಗಲ್ಲ” ಎಂದರು.