ಮುಂಬೈ: ಈಗ ಏನಿದ್ದರೂ ಇಎಂಐ ಕಾಲ. ಟಿವಿ, ಮೊಬೈಲ್, ಲ್ಯಾಪ್‌ಟಾಪ್, ಫ್ರಿಡ್ಜ್, ವಾಷಿಂಗ್ ಮಷೀನ್ ಸೇರಿ ಯಾವುದೇ ಉಪಕರಣಗಳನ್ನು ಖರೀದಿಸಿದರೂ ಎಲ್ಲ ಹಣ ಒಮ್ಮೆಯೇ ಪಾವತಿಸಬೇಕಿಲ್ಲ. ಎಲ್ಲವನ್ನೂ ಇಎಂಐ ಮೂಲಕವೇ ಖರೀದಿಸಬಹುದು. ನಾಲ್ಕು ಸಾವಿರ ರೂಪಾಯಿ ಮೌಲ್ಯದ ಇಯರ್‌ಬಡ್ಸ್ ಖರೀದಿಗೂ ಇಎಂಐ ಸೌಲಭ್ಯ ಇರುವ ಕಾಲ ಇದು. ಆದರೆ, ಮಾವಿನ ಹಣ್ಣು ಖರೀದಿಗೂ ಇಎಂಐ ಸೌಲಭ್ಯ ಇರುವುದನ್ನು ಎಲ್ಲಾದರೂ ಕೇಳಿದ್ದೀರಾ? ನೋಡಿದ್ದೀರಾ? ಆದರೆ, ಪುಣೆಯಲ್ಲಿ ಮಾತ್ರ ಅಲ್ಫಾನ್ಸೋ ಮಾವಿನ ಹಣ್ಣುಗಳನ್ನು ಇಎಂಐ (Mangoes On EMI) ಮೂಲಕ ಖರೀದಿಸಬಹುದು.
ಹೌದು, ಇದು ಮಾವಿನ ಹಣ್ಣಿನ ಸೀಸನ್. ಹಾಗಾಗಿ, ಅಲ್ಫಾನ್ಸೋ ಸೇರಿ ಎಲ್ಲ ಮಾವಿನ ಹಣ್ಣುಗಳ ಬೆಲೆ ಗಗನಕ್ಕೇರಿದೆ. ಒಂದು ಕೆಜಿ ಅಥವಾ ಒಂದು ಡಜನ್ ಮಾವಿನ ಹಣ್ಣು ಖರೀದಿಸಬೇಕು ಎಂದರೆ ಜನ ಎರಡೆರಡು ಬಾರಿ ಯೋಚಿಸುವಂತಾಗಿದೆ. ಇದನ್ನು ಮನಗಂಡ ಪುಣೆಯ ಮಾವಿನ ಹಣ್ಣಿನ ವ್ಯಾಪಾರಿ ಗೌರವ್ ಸನಾಸ್ ಅವರು ಹೊಸ ಉಪಾಯ ಕಂಡುಕೊಂಡಿದ್ದಾರೆ. ಮಾವಿನ ಹಣ್ಣನ್ನೂ ಅವರು ಇಎಂಐ ಮೇಲೆ ನೀಡುತ್ತಿದ್ದು, ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅವರ ವ್ಯಾಪಾರವೂ ಜೋರಾಗಿದೆ.
ದೇಶದಲ್ಲೇ ಮೊದಲು
ಅಲ್ಫಾನ್ಸೋ ಮಾವಿನ ಹಣ್ಣು ಒಂದು ಡಜನ್‌ಗೆ 800 ರೂ.ನಿಂದ 1,300 ರೂ. ಆಗಿದೆ. ಹಾಗಾಗಿ ಮಾವಿನ ಹಣ್ಣನ್ನೂ ಗೌರವ್ ಸನಾಸ್ ಅವರು ಇಎಂಐ ಮೂಲಕ ನೀಡುತ್ತಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಮಾವಿನ ಹಣ್ಣಿಗೂ ಇಎಂಐ ಸೌಲಭ್ಯ ನೀಡಿದ ಮೊದಲ ವ್ಯಾಪಾರಿ ಗೌರವ್ ಸನಾಸ್ ಎನಿಸಿದ್ದಾರೆ. “ಮಾವಿನ ಹಣ್ಣಿನ ಬೆಲೆ ಜಾಸ್ತಿಯಾದ ಕಾರಣ ಗ್ರಾಹಕರು ಡಜನ್‌ಗಟ್ಟಲೆ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ಎಸಿ, ಫ್ರಿಡ್ಜ್ ಸೇರಿ ಎಲ್ಲ ಗೃಹೋಪಯೋಗಿ ವಸ್ತುಗಳು ಇಎಂಐ ಮೇಲೆ ಸಿಗಬೇಕಾದರೆ, ಮಾವಿನ ಹಣ್ಣುಗಳಿಗೆ ಏಕೆ ಇಎಂಐ ನೀಡಬಾರದು ಎಂದು ಈ ಸೌಲಭ್ಯ ಕಲ್ಪಿಸಿದ್ದೇನೆ” ಎಂದು ಗೌರವ್ ಸನಾಸ್ ಹೇಳಿದ್ದಾರೆ.
ಇಎಂಐ ಸೌಲಭ್ಯ ಪಡೆಯುವುದು ಹೇಗೆ?
ಪುಣೆಯಲ್ಲಿ ಗೌರವ್ ಸನಾಸ್ ಅವರ ಮಾವಿನ ಹಣ್ಣಿನ ಮಳಿಗೆಗೆ ತೆರಳಿ, ಕ್ರೆಡಿಟ್ ಕಾರ್ಡ್ ಮೂಲಕ ಮಾವಿನ ಹಣ್ಣು ಖರೀದಿಸಬಹುದು. ಕ್ರೆಡಿಟ್ ಕಾರ್ಡ್ ಮೂಲಕ ಮಾವಿನ ಹಣ್ಣು ಖರೀದಿಸಿದರೆ, ಮೂರು ತಿಂಗಳು, ಆರು ತಿಂಗಳು ಅಥವಾ ಒಂದು ವರ್ಷದವರೆಗೆ ಇಎಂಐ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಆ ಮೂಲಕ ತಿಂಗಳಿಗೆ ಇಂತಿಷ್ಟು ಎಂದು ಇಎಂಐ ಮೊತ್ತವನ್ನು ಕಟ್ಟಬಹುದಾಗಿದೆ. ಆದರೆ, 5 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಹಣ್ಣುಗಳನ್ನು ಖರೀದಿಸಿದರೆ ಮಾತ್ರ ಇಎಂಐ ಸೌಲಭ್ಯ ಸಿಗಲಿದೆ. ಆದರೂ, ಒಂದೇ ಮನೆಯಲ್ಲಿ 8-10 ಜನ ವಾಸಿಸುವ ಕುಟುಂಬಸ್ಥರು ಇಎಂಐ ಮೂಲಕ ಹಣ್ಣು ಖರೀದಿಸುತ್ತಿದ್ದಾರೆ.
ಇದನ್ನೂ ಓದಿ: Video Viral: ದಿಲ್ಲಿ ಮೆಟ್ರೋದಲ್ಲಿ ಬಿಕಿನಿ ರೀತಿ ಬಟ್ಟೆ ತೊಟ್ಟ ಯುವತಿಯ ವಿಡಿಯೋ ವೈರಲ್! ಡಿಎಂಆರ್‌ಸಿ ಹೇಳಿದ್ದೇನು?