ಅಗರ್ತಲ: ತ್ರಿಪುರದಲ್ಲಿ ಕಳೆದ ವರ್ಷ ಮುಖ್ಯಮಂತ್ರಿಯಾಗಿದ್ದ ಬಿಪ್ಲಬ್ ಕುಮಾರ್ ದೇವ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಇದು ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಬಿಪ್ಲಬ್ ದೇವ್ ನಂತರ ತ್ರಿಪುರದ ಚುಕ್ಕಾಣಿ ಹಿಡಿದು, ಉತ್ತಮ ಆಡಳಿತ ನೀಡಿದ ಡಾ.ಮಾಣಿಕ್ ಸಾಹ (Manik Saha) ಅವರೀಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಮಾರ್ಚ್ 8ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸೋಮವಾರ ನಡೆದ ಶಾಸಕರ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಮಾಣಿಕ್ ಸಾಹ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಸತತ ಎರಡನೇ ಅವಧಿಗೆ ಬುಧವಾರ ಪ್ರಮಾನವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಕೇಂದ್ರದ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗೋವಾ ಬಳಿಕ ತ್ರಿಪುರಾದಲ್ಲಿ ಟಿಎಂಸಿಗೆ ನಿರಾಸೆ, ಶೂನ್ಯ ಸಾಧನೆ
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಐಪಿಎಫ್‌ಟಿ ಮೈತ್ರಿಯು 33 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಬಹುಮತ ಪಡೆದಿದೆ. ಮಾಣಿಕ್ ಸಾಹ ಅವರು ತ್ರಿಪುರ ಸಿಎಂ ಆದ ಬಳಿಕ ನಡೆಸಿದ ಆಡಳಿತವು ಜನರಿಗೆ ತೃಪ್ತಿ ತಂದಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಬಿಜೆಪಿಯು ಮತ್ತೆ ಸಾಹ ಅವರನ್ನೇ ಸಿಎಂ ಆಗಿ ಮುಂದುವರಿಸುತ್ತಿದೆ ಎಂದು ತಿಳಿದುಬಂದಿದೆ.