Site icon Vistara News

ತ್ರಿಪುರ ಹೊಸ ಮುಖ್ಯಮಂತ್ರಿ ಮಾಣಿಕ್‌ ಸಾಹಾ ಮೂಲತಃ ಹಲ್ಲಿನ ಡಾಕ್ಟರ್

Manik Saha

ನವದೆಹಲಿ: ತ್ರಿಪುರ ಹೊಸ ಮುಖ್ಯಮಂತ್ರಿ ಸ್ಥಾನಕ್ಕೆ ಅಲ್ಲಿನ ಬಿಜೆಪಿ ಅಧ್ಯಕ್ಷರಾಗಿದ್ದ ಮಾಣಿಕ್‌ ಸಾಹಾ (Manik Saha) ನೇಮಕಗೊಂಡಿದ್ದು, ಭಾನುವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅಲ್ಲಿನ ಸಿಎಂ ಆಗಿದ್ದ ಬಿಪ್ಲಬ್‌ ಕುಮಾರ್‌ ದೇಬ್‌ ಮೇ 14ರಂದು ರಾಜೀನಾಮೆ ಸಲ್ಲಿಸಿದ್ದರು. ಅಂದೇ ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಕೇಂದ್ರ ಸಚಿವ ಭೂಪೇಂದರ್‌ ಯಾದವ್‌ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್‌ ತೌಡೆ ಕೇಂದ್ರ ವೀಕ್ಷಕರಾಗಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಮಾಣಿಕ್‌ ಸಾಹಾರನ್ನೇ ಮುಂದಿನ ಮುಖ್ಯಮಂತ್ರಿಯೆಂದು ಘೋಷಿಸಲಾಯಿತು. ಇವರು ತ್ರಿಪುರದ 12ನೇ ಸಿಎಂ ಆಗಿದ್ದಾರೆ. ಇವರ ನೂತನ ಕ್ಯಾಬಿನೆಟ್ ಇಂದು ರಚನೆಯಾಗಲಿದೆ.

ಭಾನುವಾರ ಮಾಣಿಕ್‌ ಸಾಹಾ ಅವರಿಗೆ ರಾಜ್ಯಪಾಲ ಎಸ್‌.ಎನ್‌ ಆರ್ಯಾ ಪ್ರಮಾಣವಚನ ಬೋಧಿಸಿದರು. ಬಳಿಕ ಮಾತನಾಡಿದ ನೂತನ ಮುಖ್ಯಮಂತ್ರಿ, ನಾನು ತ್ರಿಪುರದ ಜನರಿಗಾಗಿ ಕೆಲಸ ಮಾಡುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಯೋಜನೆಗಳನ್ನು ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತೇನೆ. ಅದರೊಂದಿಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾಣಿಕ್‌ ಸಾಹಾ ಅವರು ಈ ವರ್ಷದ ಪ್ರಾರಂಭದಲ್ಲಿ ತ್ರಿಪುರದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇಲ್ಲಿ 2023ರ ಪ್ರಾರಂಭದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ಬೆನ್ನಲ್ಲೇ ಬಿಪ್ಲಬ್‌ ಕುಮಾರ್‌ ಬದಲಿಗೆ ಸಾಹಾ ಅವರನ್ನು ಸಿಎಂ ಮಾಡಲಾಗಿದೆ. ಇನ್ನೊಂದು ಮುಖ್ಯ ವಿಷಯವೆಂದರೆ ಮಾಣಿಕ್‌ ಸಾಹಾ 2016ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದವರು. 2020ರಲ್ಲಿ ತ್ರಿಪುರ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡರು. ವೃತ್ತಿಯಲ್ಲಿ ಡೆಂಟಿಸ್ಟ್‌ ಆಗಿರುವ ಇವರು ರಾಜಕೀಯಕ್ಕೆ ಸೇರ್ಪಡೆಯಾಗುವುದಕ್ಕೂ ಮೊದಲು ಹಪಾನಿಯಾದಲ್ಲಿರುವ ತ್ರಿಪುರ ವೈದ್ಯಕೀಯ ಕಾಲೇಜಿನ ಪ್ರೊಫೆಸರ್‌ ಆಗಿದ್ದರು.

ಪ್ರತಿಪಕ್ಷಗಳಿಂದ ಟೀಕೆ
ಬಿಜೆಪಿಯ ಮುಖ್ಯಮಂತ್ರಿ ಬದಲಾವಣೆ ಮಾಡುವ ಕ್ರಮವನ್ನು ಸಿಪಿಐ (ಎಂ) ಸೇರಿ ಹಲವು ಪಕ್ಷಗಳು ಟೀಕಿಸಿವೆ. ತ್ರಿಪುರದಲ್ಲಿ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ, ರಾಜ್ಯದಲ್ಲಿ 15ವರ್ಷಗಳ ಕಮ್ಯೂನಿಸ್ಟ್‌ ಆಡಳಿತ ಕೊನೆಗೊಂಡಿತ್ತು. ಆಗ ಬಿಪ್ಲಬ್‌ ಕುಮಾರ್‌ ದೇಬ್‌ರನ್ನು ಸಿಎಂ ಹುದ್ದೆಗೆ ಏರಿಸಿತ್ತು. ಆದರೆ ಈಗ ಅವರನ್ನು ಇಳಿಸಿದ್ದೇಕೆ? ಈಗಾಗಲೇ ಕರ್ನಾಟಕ, ಗುಜರಾತ್‌, ಉತ್ತರಾಖಂಡ್‌ಗಳಲ್ಲಿ ಮಾಡಿದ್ದನ್ನೇ ಬಿಜೆಪಿ ಇಲ್ಲಿಯೂ ಮಾಡಿದೆ. ಬಿಜೆಪಿ ಫ್ಯಾಸಿಸ್ಟ್‌ ಮಾದರಿ ಆಡಳಿತ ನಡೆಸುತ್ತಿದೆ ಎಂದು ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.

ಪ್ರಧಾನಿ ಮೋದಿಯವರಿಂದ ಶುಭಾಶಯ
ತ್ರಿಪುರ ನೂತನ ಮುಖ್ಯಮಂತ್ರಿ ಮಾಣಿಕ್‌ ಸಾಹಾ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಟ್ವೀಟ್‌ ಮಾಡಿರುವ ಅವರು, ಮಾಣಿಕ್‌ ಸಾಹಾರಿಗೆ ಅಭಿನಂದನೆಗಳು. ಅವರ ಆಡಳಿತ ಅತ್ಯಂತ ಫಲಪ್ರದವಾಗಿರಲಿ ಎಂದು ಹಾರೈಸುತ್ತೇನೆ. ಹಾಗೇ, ತ್ರಿಪುರದಲ್ಲಿ 2018ರಿಂದ ಶುರುವಾದ ಅಭಿವೃದ್ಧಿ ಯಾನಕ್ಕೆ ಸಾಹಾ ಅವರು ಇನ್ನಷ್ಟು ಚೈತನ್ಯ ತುಂಬುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Biplab Kumar Deb: ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ ರಾಜೀನಾಮೆ

Exit mobile version