Site icon Vistara News

ಮೈತೈ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ತನ್ನ ಆದೇಶವನ್ನೇ ಬದಲಿಸಿದ ಮಣಿಪುರ ಹೈಕೋರ್ಟ್!

Manipur High Court modifies its order to add Maitai community to ST list

ನವದೆಹಲಿ: 2023ರ ಮಾರ್ಚ್‌ ತಿಂಗಳಲ್ಲಿ ನೀಡಲಾಗಿದ್ದ ಆದೇಶದಲ್ಲಿ ಪರಿಶಿಷ್ಟ ಪಂಗಡಕ್ಕೆ(Scheduled Tribe List) ಮೈತೈ (Meiteis) ಸಮುದಾಯವನ್ನು ಸೇರಿಸಬೇಕು ಎಂದು ಮಣಿಪುರ ಹೈಕೋರ್ಟ್ (Manipur High Court) ಶಿಫಾರಸು ಮಾಡಿತ್ತು. ಆದರೆ, ಈಗ ತನ್ನ ಆದೇಶವನ್ನು ಬದಲಿಸಿರುವ ಹೈಕೋರ್ಟ್, ಮೈತೈ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಶಿಫಾರಸು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ನಿಲುವಿಗೆ ವಿರುದ್ಧವಾಗಿದೆ. ಹಾಗಾಗಿ, ಆದೇಶದಲ್ಲಿನ ವಿವಾದಿತ ಪ್ಯಾರಾಗ್ರಾಫ್ ಅಳಸಿ ಹಾಕಲಾಗುವುದು ಎಂದು ಹೇಳಿದೆ.

2023ರ ಮಾರ್ಚ್ 27ರಂದು ನೀಡಿದ ಈ ನಿರ್ದೇಶನದಿಂದಾಗಿ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಉಂಟಾಗಿ ಈವರೆಗೂ ಸುಮಾರು 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಬುಧವಾರ ಮರುಪರಿಶೀಲನಾ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಗೊಲ್ಮೆಯ್ ಗೈಫುಲ್‌ಶಿಲು ಅವರ ಏಕಸದಸ್ಯ ಪೀಠವು, ತಾನೇ ಈ ಹಿಂದೆ ನೀಡಿದ್ದ ಆದೇಶವನ್ನು ರದ್ದುಗೊಳಿಸಿತು.

ಕಳೆದ ವರ್ಷದ ತೀರ್ಪಿನ ವಿವಾದಾತ್ಮಕ ಪ್ಯಾರಾಗ್ರಾಫ್‌ ಪ್ರಕಾರ, ಮೈತೈ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು. ಅದೇ ಪ್ಯಾರಾಗ್ರಾಫ್‌ ಅನ್ನು ಈಗ ಅಳಿಸಲು ಹಾಕಲು ಹೈಕೋರ್ಟ್ ಹೇಳಿದೆ. ಕಳೆದ ವರ್ಷದ ತೀರ್ಪಿನ ಪ್ಯಾರಾಗ್ರಾಫ್‌ನಲ್ಲಿ ರಾಜ್ಯ ಸರ್ಕಾರವು “ಮೀತೈ ಅಥವಾ ಮೈತೈ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಅರ್ಜಿದಾರರ ಪ್ರಕರಣವನ್ನು ತ್ವರಿತವಾಗಿ, ಮೇಲಾಗಿ ನಾಲ್ಕು ವಾರಗಳ ಅವಧಿಯೊಳಗೆ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಪರಿಗಣಿಸುತ್ತದೆ ಎಂದು ಹೇಳಿತ್ತು.

ಫೆಬ್ರವರಿ 21 ರಂದು ನ್ಯಾಯಮೂರ್ತಿ ಗೈಫುಲ್‌ಶಿಲು ಅವರ ತೀರ್ಪು ನೀಡಿ, ಪರಿಶಿಷ್ಟ ಪಂಗಡದ ಪಟ್ಟಿ ತಿದ್ದುಪಡಿಗಳಿಗೆ ಭಾರತ ಸರ್ಕಾರದ ನಿಗದಿತ ಕಾರ್ಯವಿಧಾನವನ್ನು ಸೂಚಿಸುವ ನಿರ್ದೇಶನವನ್ನು ತೆಗೆದುಹಾಕುವ ಅಗತ್ಯತೆಯ ಮೇಲೆ ಕೇಂದ್ರೀಕರಿಸಿದ್ದರು. ನ್ಯಾಯಮೂರ್ತಿ ಗೈಫುಲ್‌ಶಿಲು ಅವರು, “ಪ್ಯಾರಾಗ್ರಾಫ್ ಸಂಖ್ಯೆ 17 (iii)ನಲ್ಲಿ ನೀಡಲಾದ ನಿರ್ದೇಶನವನ್ನು ಅಳಿಸಬೇಕಾಗಿದೆ ಮತ್ತು ಮಾರ್ಚ್ 27, 2023 ರ ತೀರ್ಪು ಮತ್ತು ಆದೇಶದ ಪ್ಯಾರಾಗ್ರಾಫ್ ಸಂಖ್ಯೆ 17 (iii) ಅನ್ನು ಅಳಿಸಲು ಆದೇಶಿಸಲಾಗಿದೆ…” ಎಂದು ತಿಳಿಸಿದ್ದಾರೆ.

ಬುಡಕಟ್ಟು ವ್ಯವಹಾರಗಳ ಸಚಿವಾಲಯದ 2013-14 ವರದಿಯಲ್ಲಿ ವಿವರಿಸಲಾದ ಸಾಂವಿಧಾನಿಕ ಪ್ರೋಟೋಕಾಲ್ ಅನ್ನು ಉಲ್ಲೇಖಿಸಿ, ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ವ್ಯಾಖ್ಯಾನದೊಂದಿಗೆ ಹೊಂದಾಣಿಕೆಯ ಅಗತ್ಯವನ್ನು ನ್ಯಾಯಾಲಯವು ಎತ್ತಿ ತೋರಿಸಿದೆ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರ ಹಿಂಸಾಚಾರದಲ್ಲಿ ಮಯನ್ಮಾರ್‌ ಬಂಡುಕೋರರು ಶಾಮೀಲು!

Exit mobile version